ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅತ್ಯಾಚಾರ ಖಂಡಿಸಿ ಕಾರ್ಯನಿರತ ಪತ್ರಕರ್ತರಿಂದ ಪ್ರತಿಭಟನೆ

Lingaraj Badiger
Updated On : 27 Aug 2013, 11:00 am

ರಾಯಚೂರು:  ಮುಂಬಯಿಯಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿ ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ದಕ್ಷಿಣ ಮುಂಬಯಿಯ ಶಕ್ತಿ ಮಿಲ್ ಪ್ರದೇಶದಲ್ಲಿ ಕಾರ್ಯನಿಮಿತ್ತ ಫೋಟೋ ತೆಗೆಯಲು ತೆರಳಿದ್ದ ಆಂಗ್ಲ ಪತ್ರಿಕೆಯೊಂದರ ಛಾಯಾಗ್ರಾಹಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ, ಆಕೆಯ ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿದರು.
ಮಹಿಳೆಯರ ಮೇಲೆ ಅತ್ಯಾಚಾರ, ಪತ್ರಕರ್ತರ ಮೇಲೆ ಹಲ್ಲೆಯಂಥ ಘಟನೆಗಳು ಈಚಿನ ದಿನಮಾನಗಳಲ್ಲಿ ಹೆಚ್ಚುತ್ತಿವೆ. ಇದರಿಂದ ಮಹಿಳೆಯರು ಸ್ವತಂತ್ರವಾಗಿ ಮನೆ ಬಿಟ್ಟು ಹೊರಬರದಂಥ ಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರೂ ಸಹ ನಿರ್ಭಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರದಂಥ ಪ್ರಕರಣಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಗಾಗಲೇ ನಡೆದಂಥ ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರ ಮತ್ತು ಹಲ್ಲೆಯಂಥ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಪತ್ರಕರ್ತರ ಮೇಲೆ ದೌರ್ಜನ್ಯ ತಡೆಗೆ ವಿಶೇಷ ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ಜಯರಾಂ, ಬಿ.ವೆಂಕಟಸಿಂಗ್, ದತ್ತು ಸರ್ಕೀಲ್, ಬಸವರಾಜ ನಾಗಡದಿನ್ನಿ, ವಿಜಯಕುಮಾರ್, ಅಶೋಕ್, ಸತೀಶ್, ಮೋಮಿನ್ ಖಾನ್, ಶಿವಪ್ಪ ಮಡಿವಾಳ, ಮಲ್ಲಿಕಾರ್ಜುನಸ್ವಾಮಿ, ಹನುಮಂತು, ಉಪೇಂದ್ರ ಕೇಶವರಾವ್, ಭೀಮಣ್ಣ ಹೀರಾ, ಯಲ್ಲುಲಿಂಗ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement