ಸಣ್ಣ ನೀರಾವರಿ ಇಲಾಖೆಗೆ ರು. 1200 ಕೋಟಿ: ತಂಗಡಗಿ
ಸಿಂಧನೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಸಣ್ಣ ನೀರಾವರಿ ಇಲಾಖೆಗೆ 1200 ಕೋಟಿ ಮೀಸಲಿರಿಸಲಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸೋಮವಾರ ತಾಲೂಕಿನ ಬಳಗಾನೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಣ್ಣನೀರಾವರಿ ಇಲಾಖೆ ಕಾಮಗಾರಿಗಳನ್ನು ಮುಂದುವರೆಸಲು ನಿರ್ಣಯ ಕೈಗೊಳ್ಳಲು ಆ.29ಕ್ಕೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಲು ವಿವಿಧ ಶಾಸಕರ ಮತ್ತು ನೀರಾವರಿ ತಜ್ಞರ ಸಭೆಯನ್ನು ಕರೆಯಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದವರಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ವೆಲ್ಗಳನ್ನು ಕೊರೆಯಿಸಲಾಗುತ್ತಿದ್ದು ವಿದ್ಯುತ್ ಸಂಪರ್ಕದ ವಿಳಂಬದಿಂದ ಉದ್ದೇಶಿತ ಯೋಜನೆಗಳು ಅನುಷ್ಠಾನಗೊಳಿಸಲು ಸಮಸ್ಯೆಯಾಗಿರುವುದರಿಂದ ಸೋಲಾರ್ ಮೂಲಕ ವಿದ್ಯುತ್ ಪೂರೈಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಕೆರೆ ಪ್ರಾಧಿಕಾರ ರಚಿಸಲಾಗಿದ್ದು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3562, ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ 26 ಸಾವಿರ ಕೆರೆಗಳನ್ನು ಗುರುತಿಸಲಾಗಿದೆ. ಕೆಲವು ಕಡೆ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಮೂಲಕ ಪುನಶ್ಚೇತನಗೊಳಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಂಧನೂರು ತಾಲೂಕಿನಲ್ಲಿ ನಾಲ್ಕೈದು ಏತ ನೀರಾವರಿ ಯೋಜನೆಗಳ ಬಗ್ಗೆ ಈಗಾಗಲೇ ಶಾಸಕ ಹಂಪನಗೌಡ ಬಾದರ್ಲಿ ಪ್ರಾಸ್ತಾವನೆ ಸಲ್ಲಿಸಿದ್ದು, ಅವುಗಳನ್ನು ಸಹ ಮೊದಲ ಆದ್ಯತೆ ನೀಡಿ ಕಾರ್ಯಾನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು ಹೇಳಿದರು.
ಎಪಿಎಂಸಿ ಮಾಜಿ ನಿರ್ದೇಶಕ ರುದ್ರಗೌಡ ನಂದಿಹಳ್ಳಿ, ಬಸವರಾಜ ಬೇವಿನಾಳ, ಡಾ.ಎಸ್.ಎಸ್.ಜಾಗೀರದಾರ ಮತ್ತಿತರರು ಇದ್ದರು.