ದೊರಕದ ಬಸ್‌ಪಾಸ್: ಆತಂಕ
ಸಿಂಧನೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕೆ ಸರ್ಕಾರ ಬಸ್‌ಪಾಸ್ ಸೌಲಭ್ಯ ಒದಗಿಸಿದೆ.
ಆದರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಂಧನೂರು ಘಟಕದ ವ್ಯವಸ್ಥಾಪಕರು ಸರ್ಕಾರಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಾಸ್ ಸೌಲಭ್ಯ ನೀಡದಿರುವ ಬಗ್ಗೆ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಇದ್ದೂರಿನಲ್ಲಿಯೇ ಎಂ.ಎ., ಎಂ.ಕಾಂ. ಮತ್ತು ಎಂ.ಎಸ್ಸಿ. ಸ್ನಾತಕೋತ್ತರ ಪದವಿಯ ಸೌಲಭ್ಯವಿದೆ ಎನ್ನುವ ಸಮಾಧಾನ ಮತ್ತು ಖುಷಿಯಿಂದ ಡಿಗ್ರಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನಿರಾಕರಿಸುತ್ತಿರುವುದು ಬರಸಿಡಿಲು ಬಡಿದಂತಾಗಿದೆ.
ಕಾರಣ ಏನು?: ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡುವ ಕೆಲ ವಿದ್ಯಾರ್ಥಿಗಳಿಗೆ 25 ವರ್ಷ ವಯೋವುತಿ ತುಂಬಿದೆ. ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಪಾಸ್ ಸೌಲಭ್ಯವಿದೆ. ನಿಮಗೆ ಪಾಸ್ ಕೊಡಲು ಸರ್ಕಾರದ ಅನುಮತಿಯಿಲ್ಲ ಎಂದು ವ್ಯವಸ್ಥಾಪಕರು ಹೇಳಿದ್ದಾರೆನ್ನುವುದು ವಿದ್ಯಾರ್ಥಿಗಳ ಹೇಳಿಕೆ.
ಕಳೆದ ವರ್ಷ ಏಕೆ ಇರಲಿಲ್ಲ?: ಕಳೆದ ವರ್ಷ ಹಲವು ವಿದ್ಯಾರ್ಥಿಗಳು 25 ಮತ್ತು 26 ವರ್ಷದವರಿದ್ದರೂ ಪಾಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಆಗ ಅವಕಾಶ ನೀಡಿದ ಸಾರಿಗೆ ಸಂಸ್ಥೆ ಈ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಸ್ ನಿರಾಕರಿಸಿರುವುದರಿಂದ ಹಿಂದಿನ ವರ್ಷದಲ್ಲಿ ಇಲ್ಲದ ಕಾನೂನು ಈಗೇಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.
ಶಾಸಕರಲ್ಲಿ ಮನವಿ: ಸ್ನಾತಕೋತ್ತರ ಪದವಿಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
25 ವರ್ಷ ದಾಟಿದ ವಿದ್ಯಾರ್ಥಿಗಳು 25 ಜನರಿರುವುದರಿಂದ ಶಾಸಕ ಬಾದರ್ಲಿ ಹಂಪನಗೌಡರು ತಮಗೆ ಎಂ.ಎ., ಎಂ.ಕಾಂ. ಮತ್ತು ಎಂ.ಎಸ್ಸಿ. ಪದವಿ ಅಭ್ಯಾಸ ಮಾಡಲು ಬಸ್ ಪಾಸ್ ಸೌಲಭ್ಯದ ಅವಕಾಶ ಮಾಡಿಕೊಡಬೇಕೆಂದು ಶಂಕರಗೌಡ ಗುಡಿಹಾಳ ಸೇರಿದಂತೆ ಹಲವು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.