ನಾಳೆಯಿಂದ ಭಾರತ ನಿರ್ಮಾಣ ಆಂದೋಲನ
ರಾಯಚೂರು: ಭಾರತ ಸರ್ಕಾರದ ವಾರ್ತಾ ಇಲಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಅನ್ಯ ಮಾಧ್ಯಮ ಘಟಕಗಳು, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ಆ.29ರಿಂದ ಆ. 31ರವರೆಗೆ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಆಯೋಜಿಸಲಾಗಿದೆ.
ಆ.29ರಂದು ಬೆಳಗ್ಗೆ 11ಕ್ಕೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನದ ಮಳಿಗೆಗಳನ್ನು ಸಂಸದ ಎಸ್. ಫಕೀರಪ್ಪ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ನಗರ ಶಾಸಕ ಡಾ. ಶಿವರಾಜ ಪಾಟೀಲ್ ವಹಿಸುವರು. ಸಂಸದ ಶಿವರಾಮಗೌಡ, ಶಾಸಕರು ಸೇರಿಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಾಗಾರ: ಆ.29ರಂದು ಮಧ್ಯಾಹ್ನ 3ಕ್ಕೆ ರಾಷ್ಟೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ಕೃಷಿ ಅರಣ್ಯ, ಭಾರತ ನಿರ್ಮಲ ಆಭಿಯಾನ, ತೋಟಗಾರಿಕೆ, ಜಲಾನಯನ, ವಿದ್ಯುತ್, ದೂರವಾಣಿ ಕುರಿತ ಕಾರ್ಯಾಗಾರಗಳು ನಡೆಯಲಿವೆ. ಆ.30ರಂದು ಬೆಳಗ್ಗೆ 11ಕ್ಕೆ ಸರ್ವ ಶಿಕ್ಷಣ ಆಭಿಯಾನ, ಬಿಸಿಯೂಟ, ಮಹಿಳಾ ಸಶಕ್ತೀಕರಣ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಕಾರ್ಯಾಗಾರಗಳು ಜರುಗಲಿವೆ.
ಅಭಿಯಾನ: ಅಂದು ಮಧ್ಯಾಹ್ನ 3ಕ್ಕೆ ರಾಷ್ಟ್ರೀಯ ಗ್ರಾಮೀಣ ಅಭಿಯಾನದಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಕುರಿತು ಕಾರ್ಯಾಗಾರ ನಡೆಯಲಿದೆ. ಆ.31ರಂದು ಆಧಾರ್, ಆಹಾರ ಭದ್ರತಾ ಕಾಯ್ದೆ, ಸಾಮಾಜಿಕ ಭದ್ರತಾ ಯೋಜನೆಗಳು, ನೇರ ನಗದು ವರ್ಗಾವಣೆ, ಸಕಾಲ, ಭೂಸ್ವಾಧೀನ ಕಾಯ್ದೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10ರಿಂದ ವಸ್ತು ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಸಂಜೆ 5.30ರಿಂದ ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾ ನಿರ್ದೇಶಕ ಎಸ್. ವೆಂಕಟೇಶ್ವರ್ ತಿಳಿಸಿದ್ದಾರೆ.