ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ
ಸಿಂಧನೂರು: ಮುಂಬೈನಲ್ಲಿ ಪತ್ರಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಪತ್ರಕರ್ತರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಕಡಿವಾಣ ಹಾಕಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಆಡಳಿತ ನಡೆಸುವ ಸರ್ಕಾರಗಳೇ ಹೊಣೆಯಾಗಿವೆ. ಇಂತಹ ಅಮಾನವೀಯ ಘಟನೆಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಆಗ್ರಹಿಸಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪತ್ರಕರ್ತರ ಹಿತ ಕಾಪಾಡಲು ವಿಶೇಷ ಕಾನೂನು ರೂಪಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಪತ್ರಕರ್ತರಿಗೆ ಭದ್ರತೆ ಒದಗಿಸಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಅಧ್ಯಕ್ಷ ಪ್ರಹ್ಲಾದ ಗುಡಿ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ಯಾಂಕುಮಾರ, ಪ್ರಧಾನ ಕಾರ್ಯದರ್ಶಿ ಎಂ. ಭಾಸ್ಕರ್, ವೀರಭದ್ರಪ್ಪ ಜವಳಗೇರಾ, ಶರಣೇಗೌಡ ಗೊರೇಬಾಳ, ಶೇಖರ ಯರದಿಹಾಳ, ಹನುಮೇಶ ಕಮ್ಮಾರ ಬಳಗಾನೂರು, ಇನಾಯತ್ ಪಾಷಾ, ಚಂದ್ರಶೇಖರ ಬೆನ್ನೂರು, ಮಲ್ಲಿಕಾರ್ಜುನ ಚಿಲ್ಕರಾಗಿ, ಅಮರೇಶ ಅಲಬನೂರ, ಬಸವರಾಜ ಬಾದರ್ಲಿ, ಶಿವಪುತ್ರ ಧನಶೆಟ್ಟಿ ಮತ್ತಿತರರು ಇದ್ದರು.