ಟಿಪ್ಪು ಜನ್ಮದಿನ ಆಚರಣೆಗೆ ಸರ್ಕಾರಿ ರಜೆ ಘೋಷಿಸಿ
ಸಿಂಧನೂರು: ಮೈಸೂರು ಹುಲಿ ಟಿಪ್ಪುಸುಲ್ತಾನ್ ಜನ್ಮದಿನಾಚರಣೆ ನ.10ರಂದು ನಡೆಯಲಿದ್ದು, ಅಂದು ಸರ್ಕಾರ ರಜೆ ಘೋಷಿಸಿ ಸರ್ಕಾರದ ವತಿಯಿಂದ ಜನ್ಮದಿನಾಚರಣೆ ಆಚರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿರುವುದಾಗಿ ತಾಲೂಕು ಟಿಪ್ಪುಸುಲ್ತಾನ್ ಸಮಿತಿ ಅಧ್ಯಕ್ಷ ಖಾಜಿಮಲಿಕ್ ಅಹ್ಮದ್ ತಿಳಿಸಿದ್ದಾರೆ. ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು, ಖಬರಸ್ತಾನ, ಮಸೀದಿಗಳ ಅಭಿವೃದ್ಧಿಗೆ ಅನುದಾನ ನೀಡಬೇಕು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ನಿರ್ಮಾಣ, ಹಳೆಬಜಾರ್ ರಸ್ತೆ, ಮುಖ್ಯರಸ್ತೆಗಳನ್ನು ಗುಣಮಟ್ಟದಲ್ಲಿ ದುರಸ್ತಿ ಮಾಡಿಸಬೇಕು, ಟಿಪ್ಪು ಸುಲ್ತಾನ್ ಭವನ ನಿರ್ಮಾಣ ಮಾಡಬೇಕು, ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಉದ್ಯಾನ ನಿರ್ಮಿಸಬೇಕು ಎಂಬ ಬೇಡಿಕೆಗಳು ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಗರ ಘಟಕದ ಅಧ್ಯಕ್ಷ ಜೆ.ಬಾಬರ್, ಕಾರ್ಯದರ್ಶಿ ಅಮ್ಜದ್ ಅಲಿ, ಬಡಿಬೇಸ್ ಘಟಕದ ಅಧ್ಯಕ್ಷ ಎಂ.ಡಿ.ಸಲೀಂ ಭಾಗವಹಿಸಿದ್ದರು.
ಗಂಗಾನಗರದಲ್ಲಿ ಅಪಾಯಕಾರಿ ತಂತಿಗಳು
ಸಿಂಧನೂರು: ನಗರದ ವಾರ್ಡ್ ನಂ.14ರಲ್ಲಿ ಬರುವ ಗಂಗಾನಗರದಲ್ಲಿ ವಿದ್ಯುತ್ ಪ್ರವಹಿಸುವ ತಂತಿಗಳು ಪ್ರತಿ ಮನೆಯ ಮುಂದೆ ಜೋತು ಬಿದ್ದಿವೆ. ಇದರಿಂದಾಗಿ ಮನೆಯ ಮಾಳಿಗೆಗೆಗಳ ಮೇಲೆ ಏರಲು ಕುಟುಂಬದ ಸದಸ್ಯರು ಹೆದರುತ್ತಿದ್ದಾರೆ. ಸಣ್ಣ ಮಕ್ಕಳು ಅರಿಯದೇ ಇದನ್ನು ಏರಿದರೆ ಅಪಾಯ ತಪ್ಪಿದ್ದಲ್ಲ. ಕೆಲವರ ಮನೆ ಬಾಗಿಲಿಗೆ ವಿದ್ಯುತ್ ಪ್ರವಹಿಸುವ ತಂತಿಗಳು ಜೋತು ಬಿದ್ದು, ಅನಾಹುತ ಉಂಟಾಗುವ ಸಾಧ್ಯತೆ ಇವೆ. ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದರೆ ಅಪಾಯ ಸಂಭವಿಸುವ ಸಂಭವವಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಧರ್ಮರಾಜ ಉಪ್ಪಾರ, ಭದ್ರಿಗೌಡ, ಹನುಮೇಶ, ಅಜಮೀರ್ ಸಾಬ್ ಮತ್ತಿತರರು ಎಚ್ಚರಿಸಿದ್ದಾರೆ.