ಹೋರಾಟ ಹತ್ತಿಕ್ಕಬೇಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.28
ಸಂವಿಧಾನಬದ್ಧವಾಗಿ ಆಯೋಜಿಸುವ ವಿವಿಧ ರೀತಿಯ ಹೋರಾಟ ಹತ್ತಿಕ್ಕುವ ಮೂಲಕ ಅಘೋಷಿತ ತುರ್ತು ಪರಿಸ್ಥಿತಿಯನ್ನು ಪೊಲೀಸ್ ಅಧಿಕಾರಿಗಳು ಜಾರಿಗೆ ತಂದಿದ್ದಾರೆ. ಇಂಥ ಕ್ರಮಗಳ ಮೂಲಕ ಕಾರ್ಮಿಕ, ರೈತಾಪಿ ವರ್ಗದವರು ಭೂಗತ ಚಟುವಟಿಕೆಗಳಿಗೆ ಇಳಿಯುವಂಥ ಪರಿಸ್ಥಿತಿ ನಿರ್ಮಿಸದಂತೆ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಇಂಥ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಭೂಗತ ಚಟುವಟಿಕೆ ನಡೆಸುವುದು ತಮ್ಮ ಉದ್ದೇಶವಲ್ಲ. ಅಂಥದ್ದಕ್ಕೆ ತಮ್ಮ ಬೆಂಬಲವೂ ಸಿಗದು. ಆದರೆ ಹೋರಾಟದ ಎಲ್ಲ ಮಾರ್ಗಗಳನ್ನು ತಡೆಯುವ ಮೂಲಕ ಭೂಗತ ಚಟುವಟಿಕೆಗೆ ಅವಕಾಶ ಮಾಡಿಕೊಡುವುದೋ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೇ ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ ಎಂದರು.
ಉದ್ದೇಶಿತ ಸಂಘಟನೆ ಯಶಸ್ವಿ: ಇತ್ತೀಚೆಗೆ ಸಿಂಧನೂರಿಗೆ ಮುಖ್ಯಮಂತ್ರಿ ಆಗಮಿಸಿದ ವೇಳೆ ಮುತ್ತಿಗೆ ಹಾಕುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆ ಹಿನ್ನೆಲೆ ಪೊಲೀಸರು ಕೆಆರ್‌ಎಸ್, ಟಿಯುಸಿಐನ ಕ್ರಿಯಾಶೀಲ 120 ಕಾರ್ಯಕರ್ತರನ್ನು ಶೋಧಿಸಿದ್ದಾರೆ. ಹಲವರನ್ನು ಮುಂಚಿತವಾಗಿ ಬಂಧಿಸಿದ್ದರು. ಹೀಗೆ ನಾಯಕರನ್ನು ಬಂಧಿಸಿದ್ದರೂ ಸಿಂಧನೂರಿನಲ್ಲಿ ಸಂಘಟನೆಯು ಉದ್ದೇಶಿಸಿದ್ದ ಹೋರಾಟ ಯಶಸ್ವಿಯಾಗಿದೆ. ಅಕ್ರಮ ಗಣಿಗಾರಿಕೆ, ಭೂಮಿ, ಆಸ್ತಿ ಕಬಳಿಕೆ ವಿರೋಧಿಸಿ ಸಿಎಂಗೆ ಮುತ್ತಿಗೆ ಬಗ್ಗೆ ಹೇಳಿಕೆ ನೀಡಿದ್ದು ಪ್ರಚಾರದ ತಂತ್ರವಲ್ಲ ಎಂದ ಅವರು, ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸುವುದು ಹಾಗೂ ಪ್ರತಿಷ್ಠೆ ಕಾಯುವ ನೆಪದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದು ಸರಿಯಲ್ಲ ಎಂದರು.
ಹೋರಾಟ ಹತ್ತಿಕ್ಕುವ ಯತ್ನ: ಜಿಲ್ಲಾಡಳಿತವು ಸಿಎಂಗೆ ಮುತ್ತಿಗೆ ಕಾರ್ಯಕ್ರಮ ತಡೆಯುವ ಭರದಲ್ಲಿ ಮುಂಚಿತವಾಗಿಯೇ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದು, ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಿತು. ಇಂಥ ವಾತಾವರಣ ನಿರ್ಮಿಸಿದ್ದಕ್ಕೆ ಆಡಳಿತ ಸಾರ್ವಜನಿಕರ ಕ್ಷಮೆಯಾಚಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಘಟನೆಗೆ ಸಂಬಂಧಿಸಿದವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಸ್ಪಷ್ಟನೆ: ತಾವು ಹತಾಶೆಯಿಂದ ಭೂಗತ ಚಟುವಟಿಕೆಗೆ ಅವಕಾಶ ಕೊಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಬದಲಿಗೆ ಮುಖ್ಯವಾಹಿನಿಯ ಹೋರಾಟಕ್ಕೆ ಸಂವಿಧಾನಬದ್ಧ ಹಕ್ಕಿದ್ದು ಅದನ್ನು ಮೊಟಕುಗೊಳಿಸದಂತೆ ಸರ್ಕಾರಕ್ಕೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಜಿಲ್ಲಾಡಳಿತ ಇತ್ತೀಚೆಗೆ ಸಿಎಂ ಭೇಟಿಗೂ ಮುನ್ನವೇ ಬಂಧಿಸಿದ ಸಂದರ್ಭ ತಮ್ಮ ಬಳಿಯಿದ್ದ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದು, ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಿದೆ. ಈ ಬಗ್ಗೆ ಶೀಘ್ರ ಕಾನೂನು ಚಳವಳಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಂಘದ ಮುಖಂಡರಾದ ಕೆ.ನಾಗಲಿಂಗಸ್ವಾಮಿ, ಎಸ್.ರಾಜಶೇಖರ, ಮುದುಕಪ್ಪ ನಾಯಕ ಮತ್ತಿತರರಿದ್ದರು.