9 ಜನಕ್ಕೆ ಬ್ಯಾಂಕಿಂಗ್ ಉದ್ಯೋಗ
ಕ.ಪ್ರ.ವಾರ್ತೆ, ರಾಯಚೂರು, ಆ.29
ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆ ಮತ್ತು ಸುಕೋ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಮತ್ತು ಫೈನಾನ್ಸಿಂಗ್ ತರಬೇತಿಯಲ್ಲಿ 9 ಜನ ವಿದ್ಯಾರ್ಥಿಗಳು ಸಾಧನೆ ಮೆರೆದು ಸುಕೋ ಬ್ಯಾಂಕಿನಲ್ಲಿ ನೌಕರಿ ಪಡೆದಿದ್ದಾರೆಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸುಕೋ ಬ್ಯಾಂಕ್ ಮತ್ತು ತಾರಾನಾಥ ಶಿಕ್ಷಣ ಸಂಸ್ಥೆಯು ಕಳೆದ ವರ್ಷ ತರಬೇತಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ತರಬೇತಿಗೆ ಅರ್ಜಿ ಕರೆದಿದ್ದು ಅದಕ್ಕೆ 60 ಜನ ಪದವೀಧರರು ಅರ್ಜಿ ಸಲ್ಲಿಸಿದ್ದರು.
30ರಲ್ಲಿ 9 ಜನರಿಗೆ ನೇಮಕಾತಿ ಆದೇಶ: ಆ ಪೈಕಿ ಪರೀಕ್ಷೆ ನಡೆಸಿದ ನಂತರದಲ್ಲಿ 30 ವಿದ್ಯಾರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 9 ವಿದ್ಯಾರ್ಥಿಗಳು ಸುಕೋ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಲು ಅರ್ಹತೆ ಪಡೆದಿದ್ದಾರೆ. ಅವರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ ಎಂದರು.
3 ತಿಂಗಳ ಈ ತರಬೇತಿಯಲ್ಲಿ ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ಸುಕೋ ಬ್ಯಾಂಕಿನ ಅನುಭವಿ ತರಬೇತುದಾರರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಸುಕೋ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಲು ಎನ್.ರೋಹಿಣಿ, ಆರ್.ಕೋಮಲ್, ವಿನುತಾ, ಸೈಯಿದಾ ಸನಾ ಫಾತಿಮಾ, ಪ್ರಿಸಿಲ್ಲಾ, ಪೂಜಾ, ಅನಿರುದ್ಧ ಸಿಂಗ್, ಶಶಿಧರ್, ಪ್ರಸನ್ನಕುಮಾರ ಅವರುಗಳು ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಸಿಬ್ಬಂದಿ ಕೊರತೆ: ತಾರಾನಾಥ ಶಿಕ್ಷಣ ಸಂಸ್ಥೆಯು ಈ ಭಾಗದ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ರೀತಿಯಲ್ಲಿ ಉತ್ತಮ ಕೊಡುಗೆ ನೀಡುತ್ತಿದೆ. ಆದರೆ ಬೋಧಕ ಹಾಗೂ ಬೋಧಕೇತರ ವರ್ಗದ ಕೊರತೆ ಸಾಕಷ್ಟು ಕಾಡುತ್ತಿದ್ದು, ಸರ್ಕಾರ ಈ ಸಿಬ್ಬಂದಿಯ ನೇಮಕಾತಿಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆ ತಪ್ಪಿಸಲು ಕಾಲೇಜು ಆಡಳಿತ ಮಂಡಳಿಯು ಅನಿವಾರ್ಯವಾಗಿ ಉಪನ್ಯಾಸಕರನ್ನು ನೇಮಿಸಿಕೊಂಡು ತಾನೇ ಸ್ವತಃ ವೇತನ ನೀಡುತ್ತಿದೆ ಎಂದು ಹೇಳಿದರು.
ಆರ್ಥಿಕ ಹೊರೆಯಲ್ಲೂ ಸಾಧನೆ: ಆಡಳಿತ ಮಂಡಳಿಯ ಮೇಲೆ ಆರ್ಥಿಕ ಹೊರೆ ಹೆಚ್ಚಿದ್ದು ಅದನ್ನು ಭರಿಸುವ ಭಾರ ವಿದ್ಯಾರ್ಥಿಗಳ ಮೇಲೂ ಬೀಳುತ್ತಿದೆ. ಇಂಥ ಅನಿವಾರ್ಯ ಸ್ಥಿತಿ ನಿರ್ಮಿಸಲು ಸರ್ಕಾರವೇ ಕಾರಣವಾಗಿದೆ ಎಂದ ಅವರು, ಎಲ್‌ವಿಡಿ ಕಾಲೇಜು ಸ್ಥಾಪನೆಗೊಂಡು 60 ವರ್ಷ ಪೂರೈಸಿದೆ. ಅದೇ ರೀತಿ ಬಿಆರ್‌ಬಿ ಕಾಲೇಜು ಆರಂಭಗೊಂಡು 50 ವರ್ಷಗಳಾಗುತ್ತಿದ್ದು, ಇಂಥ ಸಂಭ್ರಮದ ಕ್ಷಣದಲ್ಲಿ ಕಾಲೇಜು ಆಡಳಿತವು ಸ್ನಾತಕೋತ್ತರ ಪದವಿಗಳನ್ನು ಆರಂಭಿಸಿದ ಖ್ಯಾತಿ ಗಳಿಸಿದೆ ಎಂದು ವಿವರಿಸಿದರು.
ಕಡಿಮೆ ಶುಲ್ಕದಲ್ಲಿ ಸಿಎ, ಸಿಪಿಟಿ ತರಬೇತಿ ನೀಡಲು ಆಡಳಿತ ಸಜ್ಜಾಗಿದೆ. ದೂರದ ಮಹಾನಗರಗಳಿಗೆ ತೆರಳಿ ಸ್ಥಳೀಯ ವಿದ್ಯಾರ್ಥಿಗಳು ಸಿಎ ಸಿಪಿಟಿ ಕೋರ್ಸುಗಳಿಗೆ ತರಬೇತಿ ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಥ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ತರಬೇತಿ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಕೋ ಬ್ಯಾಂಕಿನಲ್ಲಿ ನೇಮಕಗೊಂಡ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ವಿತರಿಸಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಸ್ಕಿ ನಾಗರಾಜ್, ಪ್ರಮುಖರಾದ ಆರ್.ತಿಮ್ಮಯ್ಯ, ಪಾರ್ಥಸಾರಥಿ, ರುದ್ರಪ್ಪ ಅಂಗಡಿ, ನಂದಗೋಪಾಲ್, ಪಂಚಾಕ್ಷರಿ, ಸುಕೋ ಬ್ಯಾಂಕಿನ ಪ್ರಮುಖರಾದ ನಾಗನಗೌಡ, ವೀರಭದ್ರಪ್ಪ ಮಾಸ್ತಿ ಸೇರಿ ಅನೇಕರಿದ್ದರು.
--