ಕ್ರೀಡೆಯಿಂದ ಸದೃಢ ಆರೋಗ್ಯ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.29
ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಪ್ರಗತಿಗೆ ಪೂರಕವಾಗಿ ನೆರವಾಗುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಮತ್ತು ಪೈಕಾ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಸೋಲು- ಗೆಲವಿನ ಬಗ್ಗೆ ಯೋಚಿಸದೇ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವತ್ತ ಹೆಚ್ಚಿನ ಆಸಕ್ತಿ ತೋರಬೇಕಿದೆ ಎಂದರು.
ಸದೃಢ ಆರೋಗ್ಯ ಅವಶ್ಯ: ಕ್ರೀಡೆಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಸದೃಢ ಆರೋಗ್ಯದಿಂದ ಮಾತ್ರ ಜೀವನದಲ್ಲಿ ಯಾವುದೇ ಕಠಿಣ ಸವಾಲು ಎದುರಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆ ಜತೆಗೆ ಪಠ್ಯೇತರ ಕಾರ್ಯಗಳಲ್ಲಿಯೂ ತೊಡಗಿ ಉತ್ತಮ ಆರೋಗ್ಯ ಹೊಂದಲು ಸಲಹೆ ನೀಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳಲ್ಲಿ ಸಹೋದರತ್ವದ ಮನೋಭಾವನೆ ಅಗತ್ಯ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಭವಿಷ್ಯದಲ್ಲಿ ಗೆಲವು ಪಡೆಯಲು ಸಿದ್ಧರಾಗಬೇಕು ಎಂದ ಅವರು, ಈ ಹಿಂದೆ ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವಿಲ್ಲದ ದಿನಗಳಲ್ಲಿಯೇ ಧ್ಯಾನಚಂದ್ ಅಂಥವರು ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದರು. ಸದ್ಯದ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕ್ರೀಡಾ ಸಾಧಕರಿಗೆ ಎಲ್ಲೆಡೆ ಪ್ರಾತಿನಿಧ್ಯವಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಅವರು ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ನಂತರ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಮಾರಂಭದಲ್ಲಿ ಜಿಪಂ ಸಿಇಒ ಡಾ. ಮುದ್ದುಮೋಹನ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಆರ್.ಎಸ್. ಕಣಬರಗಿ ಮತ್ತಿತರರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಮಹಿಳಾ ಕ್ರೀಡಾಳುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟನೆಗೇ ಬರಲೊಲ್ಲರು: ಅಧಿಕಾರಿಗಳ ತರಾಟೆ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.29
ಉದ್ಘಾಟನೆ ಸಮಾರಂಭಕ್ಕೆ ಆಗಮಿಸದ ಶಾಸಕ, ಅಧಿಕಾರಿಗಳು. ಉದ್ಘಾಟನೆ ನೆರವೇರಿಸಲು ಆಗಮಿಸಿದ್ದವರೂ ಅತಿಥಿಗಳಿಗೆ ಕಾಯಬೇಕಾಯಿತು. ಉದ್ಘಾಟನೆ ನಿಗದಿಯಾಗಿದಗ್ದು 10ಕ್ಕೆ. ನಡೆದಿದ್ದು 11.30ಕ್ಕೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದವರು ಆ ಹೊತ್ತಿಗೆ ಕಾದು ಸುಸ್ತಾಗಿದ್ದರು.
- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭಕ್ಕೆ ಒದಗಿದ ದುಸ್ಥಿತಿಯ ಚಿತ್ರಣವಿದು.
ಅಧಿಕಾರಿಗಳೇ ಸಿದ್ಧರಿರಲಿಲ್ಲ: ಕ್ರೀಡಾಕೂಟದ ಉದ್ಘಾಟನೆ ನಿಗದಿಯಂತೆ ಬೆಳಗ್ಗೆ 10ಕ್ಕೆ ನಡೆಯಬೇಕಿತ್ತು. ಆ ವೇಳೆಗೆ ಅಧಿಕಾರಿಗಳೇ ಸಿದ್ಧರಿರಲಿಲ್ಲ. ವೇದಿಕೆ ಸಜ್ಜುಗೊಳಿಸುವ ಕಾರ್ಯ ಆಗಷ್ಟೇ ಆರಂಭವಾಗಿತ್ತು. ವೇದಿಕೆ ಸಜ್ಜಾಗುವ ವೇಳೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಕಾದು ಕುಳಿತು ಕಚೇರಿಗಳಿಗೆ ಮರಳಿದ್ದರು.
ಈ ಮಧ್ಯೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಬೆಳಗ್ಗೆ 8ಕ್ಕೆ ನೂರಾರು ಮಹಿಳಾ ಕ್ರೀಡಾಳುಗಳು ಆಗಮಿಸಿ ಕಾದಿದ್ದರು. ಅವರನ್ನು ಕೇಳುವವರೇ ಇಲ್ಲ ಎಂಬಂಥ ಸ್ಥಿತಿ. ಕ್ರೀಡಾಳುಗಳು ತಾವೇ ತಂದಿದ್ದ ಉಪಾಹಾರ ಸೇವಿಸಿ ಉದ್ಘಾಟನೆಗೆ ಕಾದರು.
11.30ಕ್ಕೆ ಆರಂಭ: ಸಮಾರಂಭ ಮಾತ್ರ 10.30 ರವರೆಗೆ ಆರಂಭಗೊಳ್ಳಲಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ ಅವರೂ ಆಗಮಿಸಿ ಇನ್ನಿತರರಿಗೆ ಸುಮಾರು 20 ನಿಮಿಷ ಕಾಯುವಂತಾಯಿತು. 11.30 ಕಾರ್ಯಕ್ರಮ ಆರಂಭವಾಯಿತು.
ಅಧಿಕಾರಿಗಳ ವಿರುದ್ಧ ಗರಂ: ಸಮಾರಂಭದ ಅವ್ಯವಸ್ಥೆ ಕಂಡು ರೋಸಿ ಹೋಗಿದ್ದ ಆಯೋಗದ ಅಧ್ಯಕ್ಷ ಶಂಕ್ರಪ್ಪ ಅವರು ಸಮಾರಂಭದ ಉದ್ಘಾಟನೆ ಭಾಷಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ಸಮಯಪ್ರಜ್ಞೆ, ಶಿಸ್ತು ಅಳವಡಿಕೆ ಅಗತ್ಯ.ಅಧಿಕಾರಿಗಳು, ರಾಜಕೀಯ ನಾಯಕರಿಗೆ ಕಾಯದೇ ಪೂರ್ವ ನಿಗದಿಯಂತೆ ಕಾರ್ಯಕ್ರಮ ನಡೆಸುವುದನ್ನು ಅಧಿಕಾರಿಗಳು ಕಲಿಯಬೇಕಿದೆ ಎಂದರು.
ಬೇಸರ: ಕ್ರೀಡಾಕೂಟಕ್ಕೆ ವಿವಿಧೆಡೆಯಿಂದ ಆಗಮಿಸಿದ್ದ ಕ್ರೀಡಾಳುಗಳು ಬಿಸಿಲಲ್ಲೇ ಕುಳಿತ ಸಮಾರಂಭದ ಉದ್ಘಾಟನೆಗೆ ಕಾದರು. ಬಿಸಿಲಿನಿಂದ ಬಹುತೇಕರು ಬಸವಳಿದಿದ್ದು ಕಂಡುಬಂದಿತು. ಕ್ರೀಡಾಂಗಣದಲ್ಲಿಯೇ ಸೌಲತ್ತುಗಳ ಕೊರತೆಯ ಮಧ್ಯೆಯೇ ಕ್ರೀಡಾಕೂಟ ಆಯೋಜಿಸಿದ್ದರಿಂದ ಕ್ರೀಡಾಳುಗಳಿಗೆ ಕುಡಿಯುವ ನೀರು ಬಿಟ್ಟರೆ ಬೇರಾವ ಸವಲತ್ತು ದೊರೆಯದೇ ಪರದಾಡಿದ್ದು ಕಂಡುಬಂದಿತು. ಈ ಕುರಿತು ಮಾನವಿ ತಾಲೂಕಿನ ಕ್ರೀಡಾಳೊಬ್ಬರು ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಕಾಟಾಚಾರಕ್ಕೆ ಕ್ರೀಡಾಕೂಟ ಆಯೋಜಿಸಿದ್ದು ಸ್ಪಷ್ಟವಾಗಿತ್ತು.