ಪೌರ ನೌಕರರ ಸಂಘಕ್ಕೆ ಕಟ್ಟಡ ನೀಡಲು ಮನವಿ
ಲಿಂಗಸ್ಗೂರು: ಕರ್ನಾಟಕ ರಾಜ್ಯ ಪೌರ ನೌಕರರ ಸಂಘಕ್ಕೆ ಕಟ್ಟಡ ಸ್ವಾಧೀನಕ್ಕೆ ನೀಡುವಂತೆ ಒತ್ತಾಯಿಸಿ ಪುರಸಭೆ ನೌಕರರು ಗುರುವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಲಿಂಗಸ್ಗೂರು ಪುರಸಭೆಯಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ರಕ್ಷಣೆ ಸಂಘ ಅಸ್ತಿತ್ವದಲ್ಲಿದೆ. ನೌಕರ ಬಾಂಧವರ ಸಮಗ್ರ ಹಿತರಕ್ಷಣೆ ಕುರಿತ ಧ್ಯೇಯೋದ್ದೇಶಗಳ ಕಾರ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸಮಾಲೋಚನೆ ನಡೆಸಲು ಕಟ್ಟಡದ ಅವಶ್ಯಕತೆಯಿದೆ. ಕಾರಣ ಪುರಸಭೆ ಕಾರ್ಯಾಲಯದ ಎದುರುಗಡೆ ಇರುವ ಪುರಸಭೆಯ (ಕನ್ನಡ ಸಾಹಿತ್ಯ ಪರಿಷತ್ ಹೆಸರಿನ) ಕಟ್ಟಡವನ್ನು ಪೌರ ನೌಕರರ ಸಂಘಕ್ಕೆ ಹಸ್ತಾಂತರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೆಬೂಬ ಪಾಶಾ, ಕಾರ್ಯದರ್ಶಿ ಶಿವಲಿಂಗ ಮೇಗಳಮನಿ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಜೋಷಿ, ಖಜಾಂಚಿ ರಾಜಗೋಪಾಲ, ಶಾಖಾ ನಿರ್ದೇಶಕರಾದ ಶಹನವಾಜ, ಮಲ್ಲೇಶ ಅಕ್ಕರಕಿ ಸೇರಿದಂತೆ ಇದ್ದರು.
ಕಾಮಗಾರಿ ಕಳಪೆ: ಕಾಂಗ್ರೆಸ್ ಆರೋಪ
ದೇವದುರ್ಗ: ತಾಲೂಕಿನ ಮಸೀದಪೂರ ಗ್ರಾಮದ ಬಳಿಯ ನಾರಾಯಣಪುರ ಬಲದಂಡೆ ಕಾಲುವೆಯ 18ನೇ ವಿತರಣೆ ಕಾಲುವೆಯಲ್ಲಿ ಕೈಗೊಂಡಿರುವ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಹಾಗೆಯೇ ಕಾಲುವೆಯ ಮೇಲಿನ ರಸ್ತೆಗೆ ಮರಂ ಹಾಕಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಚನ್ನಪ್ಪ ಹಿಂದ್ಪೂರ ಆರೋಪಿಸಿದ್ದಾರೆ. ಅವರು ಕೆಬಿಜೆಎನ್‌ಎಲ್ ನಿಗಮದ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿ, ಮಸೀದಪೂರ ಗ್ರಾಮದ ಹತ್ತಿರದಲ್ಲಿರುವ 18ನೇ ವಿತರಣೆ ಕಾಲುವೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈಗಾಗಲೇ ಕಾಮಗಾರಿಯ ಸಿಮೆಂಟ್ ಕಿತ್ತಿದೆ. ಕಾಲುವೆ ಪಕ್ಕದ ರಸ್ತೆ ಮರಂ ಹಾಕದ್ದರಿಂದ ನಡೆದಾಡಲೂ ಆಗದಂಥ ಸ್ಥಿತಿ ಎಂದು ಆರೋಪಿಸಿದರು. ರೈತರಿಗೆ ಸಮರ್ಪಕವಾಗಿ ನೀರು ಮುಟ್ಟಬೇಕಾದರೆ ಕಾಲುವೆ ಹೂಳೆತ್ತುವ ಕಾರ್ಯವಾಗಬೇಕಿದೆ. ಆದರೆ ಅಸಮರ್ಪಕ ಕಾರ್ಯ ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಪಾವತಿಸದಂತೆ ಅವರು ಒತ್ತಾಯಿಸಿದ್ದಾರೆ.
ರ್ಯಾಗಿಂಗ್ ಕಾರ್ಯಾಗಾರ ಮುಂದೂಡಿಕೆ
ರಾಯಚೂರು: ನಗರದ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಆ.30ರಂದು ಆಯೋಜಿಸಿದ್ದ ರ್ಯಾಗಿಂಗ್ ಕುರಿತ ಕಾನೂನು ಕಾರ್ಯಾಗಾರವನ್ನು ಮುಂದೂಡಲಾಗಿದೆ. ರ್ಯಾಗಿಂಗ್ ವಿರೋಧಿ ಕಾನೂನಿನ ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನು ಕೆಲ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರ ಕಚೇರಿ ತಿಳಿಸಿದೆ.