ಮಾಹಿತಿ ಆಂದೋಲನ ಯಶಸ್ವಿ: ಡಾ.ಹಿರೇಮಠ್
ರಾಯಚೂರು: ಶಿಶುಗಳಿಗೆ ಮಾರಕ ರೋಗಗಳ ವಿರುದ್ಧ ಲಸಿಕೆ ಅಗತ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಗು ಜನಿಸಿದಾಗ ಪೋಲಿಯೋ, ಹೆಫಟೈಟಿಸ್, ಬಿಸಿಜಿ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿ ಡಾ. ಹಿರೇಮಠ್ ಹೇಳಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಬಳ್ಳಾರಿ ಶಾಖೆ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ರಾಯಚೂರು, ಮತ್ತು ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಚಂದ್ರಬಂಡಾ ಗ್ರಾಮದಲ್ಲಿ ಆಯೋಜಿಸಿದ್ದ ಮಾಹಿತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಜನನಿ ಸುರಕ್ಷಾ ಯೋಜನೆಯಿಂದಾಗಿ ಪ್ರತಿ ವರ್ಷ 40 ಸಾವಿರ ನವಜಾತ ಶಿಶುಗಳ ಸಾವು ತಡೆಯಲು ಸಾಧ್ಯವಾಗಿದೆ ಎಂದರು.
ಆಹಾರ ಭದ್ರತಾ ವಿಧೆಯಕ- ಅಂತ್ಯೋದಯ ಅನ್ನ ಯೋಜನೆಯ ಬಗ್ಗೆ ಕ್ಷೇತ್ರ ಪ್ರಚಾರ ಸಹಾಯಕ ಜಿ. ಪ್ರಕಾಶ ಮಾತನಾಡಿದರು.
ಆರೋಗ್ಯ ನಿರೀಕ್ಷಕ ರವಿಕುಮಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಬಗ್ಗೆ ವಿವರಿಸಿದರು.
--
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ
ಲಿಂಗಸ್ಗೂರು: ತಾಲೂಕಿನ ಆನಾಹೊಸೂರು ಗ್ರಾಪಂ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಹನುಮಂತೆಮ್ಮ ಬಸಪ್ಪ ತಳವಾರ ಅವರು ಗುರುವಾರ ರಾಜಿನಾಮೆ ಸಲ್ಲಿಸಿರುತ್ತಾರೆ.
ಸಹಾಯಕ ಆಯುಕ್ತ ಟಿ. ಯೋಗೇಶ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ ಅವರು, ಪ್ರಸ್ತುತ 8 ತಿಂಗಳಿಂದ ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ಆದರೆ ಈಗ ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಕರ್ತವ್ಯ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಪಂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದು ಸರಿಯಲ್ಲ. ಕಾರಣ ರಾಜಿನಾಮೆ ಪತ್ರ ಸ್ವೀಕರಿಸಬೇಕೆಂದು ಹನುಮಂತೆಮ್ಮ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಶೋಕ ಕಟ್ಟಿಮನಿ, ಮುಖಂಡರಾದ ಉದಯ ಕುಮಾರ, ಪುರುಷೋತ್ತಮ, ಗುಂಡಪ್ಪ ಇಸ್ಲಾಂಪುರ, ಗದ್ದೆಪ್ಪ ಗುರಿಕಾರ, ಆನಂದ ಕುಮಾರ, ಸಂಜೀವಪ್ಪ, ಬಸಪ್ಪ, ದ್ಯಾವಣ್ಣ, ನಿಸಾರ ಅಹ್ಮದ ಸೇರಿದಂತೆ ಇದ್ದರು.