ವ್ಯಾಪಾರಕ್ಕಿರುವ ಯೋಜನೆಗಳು ಸದುಪಯೋಗವಾಗಲಿ: ಅಶೋಕ
ಕ.ಪ್ರ. ವಾರ್ತೆ ಬೀದರ್ ಆ.29
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಮಾಡಲು ಸಾಕಷ್ಟು ಅವಕಾಶಗಳಿದ್ದು, ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆಯಬೇಕೆಂದು ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಬಿರಾದಾರ ಹೇಳಿದರು.
ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ.) ಜಿಲ್ಲಾ ಕೈಗಾರಿಕಾ ಕೇಂದ್ರ ಬೀದರ್, ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಬಿದ್ರಿ ಯೂತ್ ಮಂಡಳ ಬೀದರ್, ಎಂಬಿಎ ವಿಭಾಗ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜ್ ಬೀದರ್ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಫ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಉದ್ಘಾಟಿಸಿ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಗಾಗಿ ರಫ್ತು ವ್ಯವಹಾರವು ಅತ್ಯಂತ ಅವಶ್ಯಕವಿದೆ. ಈ ವ್ಯವಹಾರ ಅಭಿವೃದ್ಧಿಗಾಗಿ ಎಲ್ಲ ಪ್ರದೇಶಗಳಿಂದ ರಫ್ತು ಉತ್ಪನ್ನಗಳನ್ನು ಅವ್ಯಾಹತವಾಗಿ ರಫ್ತು ಮಾಡುವುದು ಅವಶ್ಯವಿರುತ್ತದೆ ಎಂದರು.
ರಫ್ತು ವ್ಯವಹಾರ ಪ್ರಾರಂಭಿಸಲು ಅವಶ್ಯಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೇ ಇದಕ್ಕಾಗಿ ಸರ್ಕಾರದಿಂದ ನೀಡಲಾಗುತ್ತಿರುವ ಸೌಕರ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಬೇಕೆಂದು ಸೂಚಿಸಿದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅದ್ಯಕ್ಷ ಶಿವರಾಜ ಹಲಶೆಟ್ಟಿ, ಎಂಎಸ್‌ಎಂಇ ಅಡಿಯಲ್ಲಿ ಬರುವ ಎಲ್ಲ ಉದ್ಯಮಿಗಳು ರಫ್ತು ವ್ಯವಹಾರದತ್ತ ದಾಪುಗಾಲು ಹಾಕಿದಾಗ ಮಾತ್ರ ಭಾರತ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಬೀದರ ಬಿದ್ರಿ ಯುಥ್ ಮಂಡಳದ ನಿರ್ದೇಶಕರಾದ ಇಸ್ಮಾಯಿಲ್ ಜಬಿವುಲ್ಲಾ ಮಾತನಾಡಿ, ಬೀದರ್‌ನ ಬಿದ್ರಿ ಕ್ರಾಫ್ಟ್ ಒಂದು ವಿಶಿಷ್ಟವಾದ ಕಲೆಯಾಗಿದೆ. ಅದನ್ನು ಅವ್ಯಾಹತವಾಗಿ ರಫ್ತುಮಾಡಲು ಮಂಡಳಿ ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ನೀಲಕಂಠ ಮಾತನಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕೈಗಾರಿಕೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಲು ಸದಾ ಸಿದ್ಧವಾಗಿದೆ. ವಿಟಿಪಿಸಿ ಅವರ ರಫ್ತು ಉತ್ತೇಜನಾ ಚಟುವಟಿಕೆಗಳನ್ನು ಶ್ಲಾಘಿಸಿದರು. ಎಲ್ಲರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಧಾರವಾಡದ ವಿಟಿಪಿಸಿ ಜಂಟಿ ನಿರ್ದೇಶಕರಾದ ಡಾ. ವೀರಣ್ಣ ಎಸ್‌ಎಚ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಬೆಂಗಳೂರಿನ ಫಿಯೊ ಮ್ಯಾನೇಜ್‌ಮೆಂಟ್ ಎಕ್ಸಿಕ್ಯುಟಿವ್ ಡಿಎಂ ದಾನಿಶಾ ಮೀನು ಇದ್ದರು. ಮುರುಳಿ ದೀಕ್ಷಿತ ನಿರೂಪಿಸಿ, ಗುರುನಾನಕ ದೇವ ಕಾಲೇಜಿನ ಪ್ರೊ. ಸಂತೋಷ ವಂದಿಸಿದರು.
ನಂತರ ತಾಂತ್ರಿಕ ಅಧಿವೇಶನಗಳು ನಡೆದವು. ಇದರಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಪರಿಚಯ ವಿಟಿಪಿಸಿಯ ಉಪ ನಿರ್ದೇಶಕ ಎಂ.ಎ.ಶರೀಫ್ ನೀಡಿದರು. ನಂತರ ಇಪಿಸಿ ಹಾಗೂ ಫಿಯೊದ ಸೇವೆಗಳ ಕುರಿತು ಡಿ.ಎಂ. ದಾನಿಶಾ ಮೀನು ವಿವರಿಸಿದರು. ಧಾರವಾಡದ ವಿಟಿಪಿಸಿ ಜಂಟಿ ನಿಜರ್ದೇಶಕರಾದ ಡಾ. ವೀರಣ್ಣ ಎಸ್.ಎಚ್. ರಫ್ತು ವ್ಯವಹಾರದಲ್ಲಿ ಸಂಘ ಸಂಸ್ಥೆಗಳ ಬೆಂಬಲವನ್ನು ವಿವರಿಸಿದರು.