ಅಮಾನತಿಗೆ ಭರವಸೆ: ಧರಣಿ ವಾಪಸ್
ಲಿಂಗಸ್ಗೂರು: ತಾಲೂಕಿನ ಆನಾಹೊಸೂರು ಗ್ರಾಪಂ ಪಿಡಿಒವನ್ನು ಅಮಾನತುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ಪ್ರಯುಕ್ತ ಸಂಘಟನೆ ಧರಣಿ ಹಿಂದಕ್ಕೆ ಪಡೆಯಲಾಗಿದೆ.
4 ದಿನಗಳಿಂದ ತಾಪಂ ಕಚೇರಿ ಹತ್ತಿರ ಜಯ ಕರ್ನಾಟಕ ಸಂಘಟನೆ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶುಕ್ರವಾರ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಭೇಟಿ ನೀಡಿ ಪಿಡಿಒ ಅವರನ್ನು ಅಮಾನತ್ತುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಗ್ರಾಪಂ ಪಿಡಿಒ ವಿವಿಧ ಯೋಜನೆಗಳಲ್ಲಿ ಹಣ ದುರುಪಯೋಗ ಮಾಡಿದ ಕುರಿತು ತನಿಖೆ ನಡೆಸಲು ಸಹಾಯಕ ಯೋಜನಾಧಿಕಾರಿ ಎಸ್.ಹೆಚ್. ಕೊಪ್ಪರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಹಾಗೂ ಸಂಘಟನೆಯ ಮೂವರು ಸದಸ್ಯರನ್ನೊಳಗೊಂಡ ತಂಡ ರಚನೆ ಮಾಡಿ ಶನಿವಾರದಿಂದ ಗ್ರಾಪಂ ಕಾರ್ಯಾಲಯಕ್ಕೆ ತೆರಳಿ ಎಲ್ಲ ಯೋಜನೆಗಳ ಕಾಮಗಾರಿ ಹಾಗೂ ಲೆಕ್ಕಪತ್ರದ ಬಗ್ಗೆ ತನಿಖೆ ನಡೆಸಲಾಗುವುದು. ತಂಡದಿಂದ ನಡೆಸಿದ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಜಿಪಂ ಉಪಕಾರ್ಯದರ್ಶಿಗಳು ಲಿಖಿತ ಭರವಸೆ ನೀಡಿದ ಪ್ರಯುಕ್ತ ಧರಣಿ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಂಯೋಜನಾಧಿಕಾರಿ ಎಸ್.ಹೆಚ್. ಕೊಪ್ಪರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ, ಸಂಘಟನೆ ಅಧ್ಯಕ್ಷ ಬಾಲನಗೌಡ, ಶಿವಪುತ್ರ ಗಾಣದಾಳ, ಕಿರಣ ಮುರಾರಿ, ಯಮನೂರು ಒಡೆಯರ್, ಮುತ್ತಣ್ಣ ಹಡಪದ್ ಸೇರಿದಂತೆ ಇದ್ದರು.