ಆದರ್ಶ ವಿದ್ಯಾಲಯಕ್ಕೆ ಶಿಕ್ಷಕರ ನೇಮಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಆ.30
ಪಟ್ಟಣದ ಆದರ್ಶ ವಿದ್ಯಾಲಯಕ್ಕೆ ಶಿಕ್ಷಕರನ್ನು ನೇಮಕ ಮಾಡುವ ಜೊತೆಗೆ ಮಕ್ಕಳಿಗೆ ಪಠ್ಯಪುಸ್ತಕ ಒದಗಿಸುವಂತೆ ಒತ್ತಾಯಿಸಿ ಪಾಲಕರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಆದರ್ಶ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅನುಗುಣವಾಗಿ ಶಿಕ್ಷಕರಿಲ್ಲದ ಪ್ರಯುಕ್ತ ಮಕ್ಕಳು ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಚೇರಿ ಕೆಲಸಕ್ಕೆ ಕ್ಲರ್ಕ್ ಇಲ್ಲದ ಪ್ರಯುಕ್ತ ಶಿಕ್ಷಕರೇ ಆ ಹುದ್ದೆ ಜವಾಬ್ದಾರಿ ನಿಭಾಯಿಸಬೇಕಿದೆ. ಶಾಲೆ ಆವರಣ ಸ್ವಚ್ಛತೆಗಾಗಿ ಪರಿಚಾರಕರ ಹುದ್ದೆ ಕೂಡಾ ಖಾಲಿಯಿದ್ದು, 6 ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಿರುವುದಿಲ್ಲ. 9 ತರಗತಿಯ ಕನ್ನಡ, ಹಿಂದಿ, ವರ್ಕ್ಬುಕ್ ಪೂರೈಕೆಯಾಗಿಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಿ ವಿದ್ಯಾಲಯದಲ್ಲಿನ ಸಮಸ್ಯೆಗಳನ್ನು ಪರಿಹಾರಿಸಬೇಕು. ಇಲ್ಲದಿದ್ದರೆ ಬಿಇಒ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳ ಪಾಲಕರಾದ ಲಿಂಗಪ್ಪ ಪರಂಗಿ, ಅಮರೇಶ ತಾವರಗೇರಾ, ನಾಗರಾಜ ತಿಪ್ಪಣ್ಣ, ಮದನಮೋಹನ, ಶಾಹಬುದ್ದೀನ್, ಶಿವಪುತ್ರಗೌಡ, ಗಂಗಮ್ಮ, ಅಂಬಿಕಾ ಸೇರಿದಂತೆ ಇನ್ನಿತರರು ಇದ್ದರು.