ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾಪಂ ನೌಕರರಿಗೆ ಹೊಸ ವೇತನ ನೀಡಿಕೆಗೆ ಆಗ್ರಹ

Mainashree
Updated On : 31 Aug 2013, 10:54 am

ರಾಯಚೂರು:  ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ನೌಕರರಿಗೆ ಅನುಮೋದನೆ, ಹೊಸ ವೇತನ ಹಾಗೂ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲೆಯ 164 ಗ್ರಾಪಂ.ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1,300ರಿಂದ 1400 ನೌಕರರಲ್ಲಿ ಬಹುತೇಕರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನೌಕರರ ಹೋರಾಟದಿಂದ 2011ರಲ್ಲಿ ಕನಿಷ್ಠ ಕೂಲಿ ಜಾರಿಯಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಶೇ. 70ರಷ್ಟು ಗ್ರಾಪಂ.ಗಳಲ್ಲಿ ಹೊಸ ವೇತನ ನೀಡಿರುವುದಿಲ್ಲ.
ವರ್ಷ ಕಳೆದರೂ ಭರವಸೆ ಈಡೇರಿಲ್ಲ: 2012ರಲ್ಲಿ ಜಿಪಂ ಮುಂದೆ ನೌಕರರು ಧರಣಿ ನಡೆಸಿದಾಗ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕನಿಷ್ಠ 3 ತಿಂಗಳಲ್ಲಿ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅನುಮೋದನೆ ನೀಡಿರುವುದಿಲ್ಲವೆಂದು ಆರೋಪಿಸಿದ್ದಾರೆ.
ಪಂಚಾಯಿತಿ ನೌಕರರಿಗೆ 8-10 ತಿಂಗಳಿಂದ ಬಾಕಿ ಇರುವ ವೇತನ ಕೊಡಿಸಬೇಕು. ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ಪಾವತಿಸಬೇಕು. ಜಿಲ್ಲೆಯ ಎಲ್ಲ ಗ್ರಾಪಂ ನೌಕರರಿಗೆ ಜನಶ್ರೀ ವಿಮಾ ಯೋಜನೆ ಜಾರಿಯಾಗಬೇಕು. ಬಿಲ್ ಕಲೆಕ್ಟರ್‌ಗಳ 10 ವರ್ಷ ಪೂರ್ಣಗೊಂಡ ನೌಕರರ ಜೇಷ್ಠತಾ ಪಟ್ಟಿಯಲ್ಲಿ ಪ್ರಕಟಿಸಬೇಕು. ಅರ್ಹ ನೌಕರರಿಗೆ ಕಾರ್ಯದರ್ಶಿ ಗ್ರೇಡ್- 2ಗೆ ಬಡ್ತಿ ನೀಡಬೇಕೆಂದು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮಲ್ಲಪ್ಪ ಹೂಗಾರ, ಉಪಾಧ್ಯಕ್ಷ ಕೆ.ನಾರಾಯಣ, ಪ್ರಧಾನ ಕಾರ್ಯದರ್ಶಿ ಮಹಾದೇವಪಪ ಜಂಬಲದಿನ್ನಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement