ತೋಟಗಾರಿಕೆ ವಿವಿಯಲ್ಲಿ ನೇಮಕಾತಿ ತಡೆಗೆ ಆಗ್ರಹ
ಕ.ಪ್ರ.ವಾರ್ತೆ, ರಾಯಚೂರು, ಆ.30
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದನ್ನು ತಡೆಯುವಂತೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ರಾಜ್ಯಪಾಲರಿಗೆ ಹೋರಾಟ ಸಮಿತಿ ಅಧ್ಯಕ್ಷ ಡಾ. ರಜಾಕ್ ಉಸ್ತಾದ್ ಮನವಿ ಸಲ್ಲಿಸಿ, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನ ಕಲ್ಪಿಸಲು ಅಗತ್ಯ ಪ್ರಕ್ರಿಯೆಗೆ ಚಾಲನೆ ನೀಡಿವೆ. ಈ ನಿಟ್ಟಿನಲ್ಲಿ ನೇಮಕಾತಿಗೆ ಸಂಬಂಧಿಸಿದ ಕಾನೂನು ರಚನೆಯಾಗಿ ಜಾರಿಯಾಗುವವರೆಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ನೇಮಕಾತಿ ನಡೆಸದಂತೆ ಈ ಹಿಂದೆಯೇ ಸೂಚಿಸಿದೆ.
ಕಾನೂನು ಬಾಹಿರ ಕ್ರಮ: ಆದರೆ ತೋಟಗಾರಿಕೆ ವಿವಿಯಲ್ಲಿ ಖಾಲಿಯಿರುವ 76 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಬಾಗಲಕೋಟೆಯ ವಿವಿ ಕ್ರಮವು ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ ಮಾಡುವಂಥದ್ದು. ವಿವಿಯಿಂದ ಸದ್ಯ ನಡೆಸಲಾಗುತ್ತಿರುವ ವಿವಿಧ ಹುದ್ದೆಗಳ ನೇಮಕಾತಿಗಳಲ್ಲಿ ಹೈದ್ರಾಬಾದ್ ಕರ್ನಾಟಕದ ಜನತೆಗೆ ಶೇ. 8ರಷ್ಟು ಮೀಸಲಾಗಬೇಕಿದೆ. ಸದ್ಯ ನೇಮಕಾತಿ ಪ್ರಕ್ರಿಯೆ ನಡೆಸುವುದರಿಂದ ಹೈ.ಕ. ಭಾಗದವರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದ ಅವರು, ನೇಮಕಾತಿಗೆ ಕೂಡಲೇ ತಡೆಯೊಡ್ಡುವಂತೆ ಒತ್ತಾಯಿಸಿದ್ದಾರೆ.
ನೇಮಕಾತಿ ಮುಂದೂಡಿಕೆಗೆ ಆಗ್ರಹ: ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ)ನೇ ಕಲಂ ಅನುಸಾರ ದೊರೆಯಲಿರುವ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸುವವರೆಗೆ ವಿಶ್ವವಿದ್ಯಾಲಯದ ಆಡಳಿತವು ಬಾಗಲಕೋಟೆಯಲ್ಲಿ ನಡೆಸುತ್ತಿರುವ ನೇಮಕಾತಿಗಳನ್ನು ಮುಂದೂಡಬೇಕು. ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿ ಆದೇಶ ಹೊರಡಿಸುವವರೆಗೂ ರಾಜ್ಯದಲ್ಲಿ ಸರ್ಕಾರಿ ಇಲಾಖೆ, ಮಂಡಳಿ, ವಿಶ್ವವಿದ್ಯಾಲಯಗಳಲ್ಲಿನ ಎಲ್ಲ ವರ್ಗಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಲು ಹಾಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸದಿರಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.