'ಆಧಾರ್' ವಿತರಣೆಗೆ ಚುರುಕು
ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ಆ.31
ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ವಿತರಿಸುವ ಕಾರ್ಯಕ್ರಮವನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಆಧಾರ್ ಕಾರ್ಡಿನ ನೋಂದಣಿ ಕೇಂದ್ರ ತೆರೆಯಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದ ರಂಗಮಂದಿರದಲ್ಲಿ ಶನಿವಾರ ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಾಗಾರದಲ್ಲಿ ಆಧಾರ್ ಕಾರ್ಡ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 18.32 ಲಕ್ಷ ಜನಸಂಖ್ಯೆಯಿದ್ದು, ಆ ಪೈಕಿ ಇದುವರೆಗೆ ಕೇವಲ 3.22 ಲಕ್ಷ ಜನರು ಮಾತ್ರ ಆಧಾರ್ ಕಾರ್ಡು ಪಡೆದಿದ್ದಾರೆಂದು ಹೇಳಿದರು.
ಯೋಜನೆ ಅನುಷ್ಠಾನಕ್ಕೆ “A¨ÛÁé’ ನೆರವು: ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬ ಪ್ರಜೆಗೂ ನೆರವಾಗುವಂಥ ರೀತಿಯಲ್ಲಿ ರೂಪಿಸಲಾಗಿದೆ. ದೇಶದ ಪ್ರಜೆಯ ಗುರುತಿಸುವ ಮೂಲಕ ಪ್ರಗತಿಗೆ ಪೂರಕ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಧಾರ್ ಕಾರ್ಡ್ ನೆರವಾಗಲಿದೆ ಎಂದರು.
ಜಿಲ್ಲೆಯಲ್ಲಿ ಆಧಾರ್ ಕಾರ್ಡು ವಿತರಣೆ ಪ್ರಕ್ರಿಯೆಯು ಜಾರಿಯಲ್ಲಿದ್ದು, ಆದರೆ ನೋಂದಣಿ ಪ್ರಮಾಣ ಗಮನಿಸಿದರೆ ತಮಗೆ ತೃಪ್ತಿ ತಂದಿಲ್ಲ. ಮುಂದಿನ ದಿನಗಳಲ್ಲಿ ನೋಂದಣಿ ಕಾರ್ಯ ಚುರುಕುಗೊಳಿಸುವ ಅವಶ್ಯಕತೆಯಿದೆ. ಆ ಮೂಲಕ ಜಿಲ್ಲೆಯ ಎಲ್ಲ ನಿವಾಸಿಗಳು ಆಧಾರ್ ಕಾರ್ಡ್ ಹೊಂದುವಂತೆ ಮಾಡುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದರು.
ನೋಂದಣಿ ಪ್ರಮಾಣ ಹೆಚ್ಚಳ ಉದ್ದೇಶ: ಗ್ರಾಮೀಣ ಭಾಗದಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಮಾಣ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಗ್ರಾಪಂ ವ್ಯಾಪ್ತಿಯ ಜನಕ್ಕೆ ಆಧಾರ್ ಕಾರ್ಡಿನ ಪ್ರಯೋಜನ ದೊರೆಯುವಂತೆ ಮಾಡಬೇಕಿದೆ ಎಂದರು.
ಆಧಾರ್ ಕಾರ್ಡಿನ ನೋಂದಣಿ ಮಾಡಿಸಲು ಆಗಮಿಸುವವರು ತಮ್ಮೊಂದಿಗೆ ವ್ಯಕ್ತಿಯನ್ನು ಗುರುತಿಸಲು ನಿಗದಿ ಮಾಡಿದ ವಿವಿಧ 17 ದಾಖಲೆಗಳನ್ನು ತಮ್ಮೊಂದಿಗೆ ತರಬೇಕಿದೆ. ಅದರಲ್ಲಿ ಅಧಿಕೃತ ವಿಳಾಸದ ದಾಖಲೆಯನ್ನು ನೋಂದಣಿಗೆ ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.
3.09 ಕೋಟಿ ಅರ್ಜಿ ವಿಲೇವಾರಿ: ಲಿಂಗಸ್ಗೂರಿನ ಸಹಾಯಕ ಆಯುಕ್ತ ಯೋಗೇಶ್ ಮಾತನಾಡಿ, ಸಕಾಲ ಯೋಜನೆಯ ಜಾರಿಯಲ್ಲಿ ಜಿಲ್ಲೆಗೆ ರಾಜ್ಯದಲ್ಲಿಯೇ 5ನೇ ಸ್ಥಾನ ಲಭಿಸಿದೆ. ಈ ಯೋಜನೆಯಡಿ ವಿವಿಧ ಮಾಹಿತಿಗಳಿಗೆ ಒಟ್ಟು 3.18 ಕೋಟಿ ಅರ್ಜಿಗಳನ್ನು ಪಡೆಯಲಾಗಿದ್ದು, ಈ ಪೈಕಿ 3.09 ಕೋಟಿ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸಕಾಲ ಯೋಜನೆ ಅಡಿ ಶೇ.2ರಷ್ಟು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ. ವಿವಿಧ ಇಲಾಖೆಗಳಲ್ಲಿ ಒಟ್ಟು 69 ಸೇವೆಗಳನ್ನು ಸಕಾಲ ಯೋಜನೆ ಅಡಿ ಪಡೆಯಬಹುದಾಗಿದೆ. ಜನತೆ ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.
ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಭೂಸ್ವಾಧೀನಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು. ಈ ವೇಳೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ನೇರ ನಗದು ವರ್ಗಾವಣೆ, ಸಾಮಾಜಿಕ ಭದ್ರತಾ ಕಾಯಿದೆ, ಮಕ್ಕಳ ಹಕ್ಕು ಸಂರಕ್ಷಣೆ ಸೇರಿ ಮತ್ತಿತರೆ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ, ಕೇಂದ್ರ ಸರ್ಕಾರದ ಪಿಐಬಿ ಅಧಿಕಾರಿ ವೆಂಕಟೇಶ್, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಶೇಖರಗೌಡ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಜನತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.