ಗುಣಮಟ್ಟದ ರಸ್ತೆ ಕಾಮಗಾರಿಗೆ ಆಗ್ರಹ
ಮುದಗಲ್: ಸಮೀಪದ ಸಜ್ಜಲಗುಡ್ಡದಿಂದ ಆಮದಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಲೋಕಪಯೋಗಿ ಇಲಾಖೆ ವ್ಯಾಪ್ತಿಯ ಈ ರಸ್ತೆಗೆ ಸರ್ಕಾರ 2012- 13ನೇ ಸಾಲಿನಲ್ಲಿ 2.40 ಕೋಟಿ ಮಂಜೂರು ಮಾಡಿದೆ. 12.6 ಕಿಮಿ ರಸ್ತೆಗೆ ಮೆಟ್ಲಿಂಗ್ ಮತ್ತು ಡಾಂಬರೀಕರಣ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ.
ಹದಗೆಟ್ಟ ರಸ್ತೆಯನ್ನು ಅಗೆದು ಮೊದಲಿನ ಕೆಟ್ಟು ಹೋದ ಡಾಂಬರನ್ನು ಹಾಕದೇ ಅದರಲ್ಲಿ ಕಡಿಮೆ ಪ್ರಮಾಣದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ಮೇಲೆ ಮರಮ ಹಾಕಿ ಮುಚ್ಚಲಾಗುತ್ತಿದೆ. ಇದರಲ್ಲಿ ಗುತ್ತಿಗೆದಾರರೊಂದಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆಂಬುದು ಗ್ರಾಮಸ್ಥರ ಆರೋಪವಾಗಿದೆ.
ಜನಪ್ರತಿನಿಧಿಗಳು, ಸಂಬಂಧಿಸಿದ ಮೇಲಾಧಿಕಾರಿಗಳು ಗಮನಹರಿಸಿ 2.40 ಕೋಟಿ ವೆಚ್ಚದ ರಸ್ತೆ ಕಳಪೆಯಾಗದೇ ಗುಣಮಟ್ಟದಿಂದ ಕೂಡಿರಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಡಿತರ ಅವ್ಯವಸ್ಥೆ: ದೂರು
ರಾಯಚೂರು: ಅಸಮರ್ಪಕ ಪಡಿತರ ಆಹಾರ ಧಾನ್ಯ ವಿತರಿಸುತ್ತಿರುವ ಬಗ್ಗೆ ಡಾ. ಬಾಬು ಜಗಜೀವನರಾಂ ಯುವಕ ಸಂಘ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
ನಗರದ ಹರಿಜನವಾಡ ಪ್ರದೇಶದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗಣೇಶ ನ್ಯಾಯಬೆಲೆ ಅಂಗಡಿ ಮತ್ತು ಸಿಸಿಎಸ್ ಬಾಪೂಜಿ ನ್ಯಾಯಬೆಲೆ ಅಂಗಡಿಗಳು ಅಕ್ರಮದಲ್ಲಿ ತೊಡಗಿದ್ದರಿಂದ ಅವುಗಳಿಗೆ ನೀಡಿದ್ದ ಪರವಾನಗಿ ರದ್ದುಗೊಳಿಸಲಾಗಿತ್ತು. ಅದರಿಂದಾಗಿ ಈ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಪಡಿತರದಾರರಿಗೆ ಅದೇ ಪ್ರದೇಶದ ಶೇಕ್ ಫರೀದ್ ಎಂಬ ಹೆಸರಿನ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ವಿತರಿಸಲು ಸೂಚಿಸಲಾಗಿದೆ. ಶೇಕ್ ಫರೀದ್ನ್ಯಾಯಬೆಲೆ ಅಂಗಡಿಯಲ್ಲಿಯೂ ಪಡಿತರದಾರರಿಗೆ ಅನ್ಯಾಯವಾಗುತ್ತಿದೆ.
ಸರಿಯಾದ ಸಮಯಕ್ಕೆ ಪಡಿತರದಾರರಿಗೆ ಆಹಾರಧಾನ್ಯ ನೀಡುತ್ತಿಲ್ಲ. ಹರಿಜನವಾಡ ಪ್ರದೇಶದಿಂದ 2 ಕಿಮೀ ದೂರದಲ್ಲಿರುವ ಈ ನ್ಯಾಯಬೆಲೆ ಅಂಗಡಿಯಿಂದ ಜನತೆಗೆ ಅಡಚಣೆಯಾಗುತ್ತಿದೆ ಸದ್ಯ ಶೇಕ್ ಫರೀದ್ ಹೆಸರಿನಲ್ಲಿ ಬೇರೊಬ್ಬರು ನ್ಯಾಯ ಬೆಲೆ ಅಂಗಡಿ ನಿರ್ವಿಹಿಸುತ್ತಿದ್ದು, ಮೂಲ ಮಾಲಿಕರೇ ಪಡಿತರ ವಿತರಣೆ ಕಾರ್ಯ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಶಿವಪ್ಪ, ಗೌರವಾಧ್ಯಕ್ಷ ಭೀಮರೆಡ್ಡಿ, ಪ್ರಧಾನ ಕಾರ್ಯದರ್ಶಿ ವೀರೇಶ್, ಪರಶಪ್ಪ, ವಿಜಯಕುಮಾರ್, ತಾಯಣ್ಣ, ರವಿಕುಮಾರ್ ಇದ್ದರು.