ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಲಾಬಿ
ಸಿಂಧನೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ನಿಗದಿಯಾಗಿದೆ. ಮೀಸಲಾತಿ ಪ್ರಕಟವಾದ ದಿನದಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ದಿನೇ ದಿನೇ ಹೆಚ್ಚುತ್ತಲಿದೆ.
ಒಟ್ಟು 31 ಜನ ಸಂಖ್ಯಾಬಲವಿರುವ ನಗರಸಭೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಕಳೆದ ನಾಲ್ಕೈದು ತಿಂಗಳಿಂದ ಕಾಯುತ್ತಿದೆ. ನಗರಸಭೆ ಸದಸ್ಯರು ಗೆದ್ದರೂ ಅಧಿಕಾರವಿಲ್ಲದೆ ಚಟಪಡಿಸುತ್ತಿದ್ದರು. ಬಿಎಸ್ಆರ್ ಐದು ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತದೆ. ಇನ್ನೂ ಕೆಜೆಪಿ ಮತ್ತು ಜೆಡಿಎಸ್ ತಲಾ ನಾಲ್ಕು ಸ್ಥಾನಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ನಾಲ್ಕು ಬಾರಿ ಸದಸ್ಯರಾಗಿ ಸಿನಿಯಾರಿಟಿ ಹೊಂದಿರುವ ಸೈಯದ್ ಜಾಫರ್ ಜಾಗೀರದಾರ ವಾರ್ಡ್ ನಂ.4 ರಿಂದ ಆಯ್ಕೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ. ನಗರಸಭೆ ಚುನಾವಣೆಗಳಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರು ವಾರ್ಡ್ಗಳಲ್ಲಿ ಪ್ರಚಾರ ಮಾಡುವಾಗ ಈ ಬಾರಿ ಕಾಂಗ್ರೆಸ್ಗೆ ಆಶೀರ್ವದಿಸಿರಿ, ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಲ್ಲೂ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ಪೈಪೋಟಿ ನಡೆಸಿರುವ ಜಾಫರ್ ಜಾಗೀರದಾರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದಾಗಿ ಬಹಿರಂಗ ಸಭೆಗಳಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.
ಶಾಸಕರ ಮೇಲೆ ಒತ್ತಡ: ಇನ್ನೂ ಮೂರು ಬಾರಿ ಗೆದ್ದಿರುವ ಪ್ರಭುರಾಜ ಈ ಬಾರಿ ವಾರ್ಡ್ ನಂ.11 ರಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಪುರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವುದರಿಂದ ಪ್ರಭುರಾಜ ಅಧ್ಯಕ್ಷ ಸ್ಥಾನ ತಮಗೆ ಸಿಗಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಸಿಎಂ- ಎ ವರ್ಗಕ್ಕೆ ಮೀಸಲು ಬಂದರೆ ಸಾಮಾನ್ಯ ವರ್ಗದ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡುವುದಿಲ್ಲ. ಆದರೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಬಿಸಿಎಂ- ಎ ವರ್ಗದ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡುವುದು ಖಚಿತವಲ್ಲ. ಅವರನ್ನೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಶಾಸಕ ಹಂಪನಗೌಡ ಬಾದರ್ಲಿ ಮೇಲೆ ಜಂಗಮ ಸಮಾಜದ ಮುಖಂಡರು ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.
ವಾರ್ಡ್ ನಂ.31 ರಿಂದ ಶೇಖರಪ್ಪ ಗಿಣಿವಾರ ಪ್ರಥಮ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದಾರೆ. ಶೇಖರಪ್ಪ ಗಿಣಿವಾರಗೆ ಹಂಪನಗೌಡ ಅಧ್ಯಕ್ಷ ಸ್ಥಾನ ವಹಿಸಬೇಕೆಂದು ಪರಿಶಿಷ್ಟ ಸಮುದಾಯ ಮುಖಂಡರು ಹೇಳುತ್ತಾರೆ.
ಇನ್ನು ಉಪಾಧ್ಯಕ್ಷ ಎಸ್ಸಿ ಮಹಿಳೆಗೆ ಮೀಸಲಾಗಿರುವುದರಿಂದ ವಾರ್ಡ್ ನಂ.26 ರಿಂದ ಲಕ್ಷ್ಮೀ ರಮೇಶ ಅವರೊಬ್ಬರೆ ಆಯ್ಕೆಯಾಗಿರುವುದರಿಂದ ಅವರ ಆಯ್ಕೆ ನಿಶ್ಚಿತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಮೂವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಹಾಗೂ ಕಾಂಗ್ರೆಸ್ ಸದಸ್ಯರು ಆಯ್ಕೆ ಮಾಡುತ್ತಾರೋ ಕಾದು ನೋಡೊಣ.