ಪಿಡಿಒ ಆರೋಪ ಸತ್ಯಕ್ಕೆ ದೂರ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಆ.31
ಸರ್ಕಾರಿ ನೌಕರರ ಸಂಘ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜಯ ಕರ್ನಾಟಕ ಸಂಘಟನೆ ವಿರುದ್ಧ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶನಿವಾರ ತಾಪಂ ಕಾರ್ಯ ನಿರ್ವಹಣಾಧಿಕಾರಿ ವೀರಭದ್ರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಆನೆಹೊಸೂರು ಗ್ರಾಪಂ ಪಿಡಿಒ ನಡೆಸಿದ ಅವ್ಯವಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ನಡೆಸಿದ ಅನಿರ್ದಿಷ್ಟ ಧರಣಿಗೆ ಸ್ಪಂದಿಸಿದ ಜಿಪಂ ಉಪ ಕಾರ್ಯದರ್ಶಿ ತನಿಖಾ ತಂಡ ರಚಿಸಿ ನ್ಯಾಯ ದೊರಕಿಸುವ ಭರವಸೆ ನೀಡಿದ ಪ್ರಯುಕ್ತ ಶುಕ್ರವಾರ ಧರಣಿ ಹಿಂಪಡೆಯಲಾಯಿತು.
ಸಂಘಟನೆ ವಿರುದ್ಧ ಮಿಥ್ಯಾರೋಪ: ಆದರೆ ಗ್ರಾಪಂ ಪಿಡಿಒಗಳು ಹಾಗೂ ಸರ್ಕಾರಿ ನೌಕರರ ಸಂಘ ಸೇರಿ ಜಯ ಕರ್ನಾಟಕ ಸಂಘಟನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ತನಿಖಾಧಿಕಾರಿಗಳು ನಡೆಸುವ ತನಿಖೆಯಿಂದ ತಮ್ಮ ಎಲ್ಲ ಅವ್ಯವಹಾರಗಳು ಬಯಲಿಗೆ ಬೀಳಲಿವೆ ಎಂಬ ಆತಂಕದಿಂದ ಸಂಘಟನೆ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಸಂಘಟನೆಯಿಂದ ಹಣ ವಸೂಲಿಯಂತಹ ಕಾರ್ಯದಲ್ಲಿ ತೊಡಗಿರುವ ಕುರಿತು ದಾಖಲೆಗಳು ಪಿಡಿಒಗಳ ಹತ್ತಿರ ಇದ್ದರೆ ಅಧಿಕಾರಿಗಳ ಮುಂದೆ ಬಹಿರಂಗಪಡಿಸಲಿ ಅಥವಾ ಸಂಘಟನೆ ವಿರುದ್ಧ ಕ್ರಿಮಿನಲ್ ಕೇಸ್ ಹೂಡಲಿ. ನೌಕರರು ಮಾಡುವ ಆರೋಪಗಳಿಗೆ ನೇರವಾಗಿ ಉತ್ತರ ನೀಡಲು ಸಂಘಟನೆ ಸಿದ್ಧವಿದ್ದು, ಇಲ್ಲಸಲ್ಲದ ಆರೋಪ ಮಾಡಿ ತಮ್ಮ ಮೇಲಿನ ಆರೋಪದ ತನಿಖೆಗೆ ಅಡ್ಡಿ ಪಡಿಸುವುದು ಸರಿಯಲ್ಲ.
ಕೂಡಲೆ ಕ್ಷಮೆಯಾಚಿಸಿ: ಕೂಡಲೇ ನೌಕರರು ಮಾಡಿದ ಆರೋಪ ಹಿಂಪಡೆದು ಜಯ ಕರ್ನಾಟಕ ಸಂಘಟನೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲ ಪಂಚಾಯ್ತಿಗಳ ಮುಂದೆ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸಂಘಟನೆ ತಾಲೂಕಾಧ್ಯಕ್ಷ ಬಾಲನಗೌಡ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷ ಶಿವಪುತ್ರ ಗಾಣದಾಳ, ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಹಡಪದ, ಮುಖಂಡರಾದ ಶಂಕ್ರಪ್ಪ ಬೆಂಡೋಣಿ, ಹುಲಗಪ್ಪ ಪೊಲೀಸ್, ಪ್ರವೀಣ ಕುಮಾರ, ಕೆಂಚಪ್ಪ ಕಂದಗಲ್, ವಿಜಯ ಭಂಡಾರಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.