4 ಪಟ್ಟು ದರ ಹೆಚ್ಚಳಕ್ಕೆ ವಿರೋಧ
ರಾಯಚೂರು: ಭೂಮಾಪನ ಇಲಾಖೆ ನೌಕರರ ಹಿತಕಾಪಾಡುವ ಭರದಲ್ಲಿ ರಾಜ್ಯ ಸರ್ಕಾರ ಭೂಮಾಪನಾ ದರವನ್ನು 4 ಪಟ್ಟು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ. ಈ ನಿರ್ಧಾರ ಹಿಂಪಡೆಯಬೇಕೆಂದು ಜಿಲ್ಲಾ ಟಿಪ್ಪು ಸುಲ್ತಾನ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಿಯಾಜ್ ನಾಯ್ಕ ಒತ್ತಾಯಿಸಿದ್ದಾರೆ.
ಕಳೆದ 4 ತಿಂಗಳಿನಿಂದ ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಭೂಮಾಪನಾ ಇಲಾಖೆಯ ನೌಕರರು ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದು ರೈತರಿಗೆ ಹೆಚ್ಚಿನ ಹೊರೆ ಹಾಕಿ ರೈತ ವಿರೋಧಿ ನೀತು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಸದ್ಯದ ನಿರ್ಧಾರದಿಂದ ರೈತರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದ್ದು, ಅದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು, ಕೂಡಲೇ ಇಂಥ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಸಂಚಾರ ಅಸ್ತವ್ಯಸ್ತ
ಸಿಂಧನೂರು: ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಗುರುವಾರ ಸಾಯಂಕಾಲ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಎರಡು ದಿನಗಳಿಂದ ಮುಖ್ಯಗೇಟ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ಕಚೇರಿ ಆವರಣದೊಳಕ್ಕೆ ತೆರಳುವ ಬೈಕ್ಗಳು ರಸ್ತೆ ಬದಿಯ ಫುಟ್ಪಾತ್ನಲ್ಲಿ ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸಾರ್ವಜನಿಕರು ಸಣ್ಣ ದಾರಿಯಲ್ಲಿ ತಮ್ಮ ಕೆಲಸ ಕಾರ್ಯಗಳ ಸಲುವಾಗಿ ಸಂಚರಿಸುತ್ತಿದ್ದುದು ಕಂಡುಬಂತು.