ಏಡ್ಸ್ ರೋಗಿಗಳ ಸಂಖ್ಯೆ ಇಳಿಮುಖ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಡಿ.1
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಎಆರ್ಟಿ ಕೇಂದ್ರದಲ್ಲಿ ಪ್ರಸ್ತುತ ವರ್ಷ 443 ಏಡ್ಸ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಮೂರು ವರ್ಷದ ಅಂಕಿ-ಅಂಶ ಗಮನಿಸಿದರೆ ಏಡ್ಸ್ ಪೀಡಿತ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ವಿಶ್ವವನ್ನೇ ಬೆಚ್ಚಿಬೀಳಿಸಿದ ಏಡ್ಸ್ ಎಂಬ ಮಹಾಮಾರಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಹಲವು ವರ್ಷಗಳ ಹಿಂದೆ ಏಡ್ಸ್ ಪೀಡಿತ ರೋಗಿಗಳು ಸೂಕ್ತ ಚಿಕಿತ್ಸೆ ಹಾಗೂ ಕೆಲ ನಿಯಮಗಳನ್ನು ಪಾಲಿಸಿದರೆ ಬಹುಕಾಲ ಬದುಕಬಹುದೆಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಿ.1ರಂದು ಏಡ್ಸ್ ದಿನಾಚರಣೆ ಆಚರಿಸಲಾಗುತ್ತದೆ.
ಸಿಂಧನೂರಲ್ಲೂ ಎಆರ್ಟಿ ಕೇಂದ್ರ: ಲಿಂಗಸ್ಗೂರು, ದೇವದುರ್ಗ, ಸುರಪೂರ, ಮಾನವಿ ಸೇರಿದಂತೆ ವಿವಿಧ ತಾಲೂಕುಗಳಿಂದ ಲಿಂಗಸ್ಗೂರು ಎಆರ್ಟಿ ಕೇಂದ್ರಕ್ಕೆ ಏಡ್ಸ್ ಪೀಡಿತ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಜಿಲ್ಲೆಯಲ್ಲಿ ರಾಯಚೂರು ಬಿಟ್ಟರೆ ಲಿಂಗಸ್ಗೂರು ಇತ್ತೀಚಿಗೆ ಸಿಂಧನೂರು ನಗರದಲ್ಲಿ ಎಆರ್ಟಿ ಕೇಂದ್ರ ಸ್ಥಾಪಿಸಿದ ಪರಿಣಾಮ ಆ ಭಾಗದ ರೋಗಿಗಳು ಅಲ್ಲಿಯೇ ಚಿಕಿತ್ಸೆ ಪಡೆಯುವ ಪ್ರಯುಕ್ತ ಲಿಂಗಸ್ಗೂರಿಗೆ ಬರುವುದು ಕಡಿಮೆಯಾಗಿದೆ.
ಕಳೆದ 2010ರಿಂದ ಈವರೆಗೆ ಅಂಕಿ- ಅಂಶ ಗಮನಿಸಿದರೆ 2,633 ಏಡ್ಸ್ ಪೀಡಿತ ರೋಗಿಗಳು ಕಂಡು ಬಂದಿದ್ದು, ಇದರಲ್ಲಿ 2,079 ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯುತ್ತಾ ಬಂದಿದ್ದಾರೆ. ಇನ್ನು 351 ಏಡ್ಸ್ ರೋಗಿಗಳು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಗುಣಮ್ಟದ ಔಷಧ ಸಿಗುತ್ತಿಲ್ಲ: ಕಳೆದ ಜನವರಿ 2013ರಿಂದ ನವೆಂಬರ್ವರೆಗೆ 443 ಏಡ್ಸ್ ಪೀಡಿತರು ಕಂಡುಬಂದಿದ್ದು, 342 ಜನ ರೋಗಿಗಳು ಔಷಧೋಪಚಾರ ಪಡೆಯುತ್ತಿದ್ದಾರೆ. 91 ಜನ ರೋಗಿಗಳು ಮೃತಪಟ್ಟಿದ್ದಾರೆ. ಲಿಂಗಸ್ಗೂರು ಎಆರ್ಟಿ ಕೇಂದ್ರದಲ್ಲಿ ಇಬ್ಬರು ವೈದ್ಯಾಧಿಕಾರಿಗಳು, 3 ಜನ ಕೌನ್ಸ್ಲರ್ಗಳು, 2 ಜನ ಡಾಟಾ ಆಪರೇಟರ್, ಒಬ್ಬ ಸ್ಟಾಫ್ ನರ್ಸ್, ಫಾರ್ಮಸಿಸ್ಟ್, ಸಂಯೋಜಕರು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿನ ಎಆರ್ಟಿ ಕೇಂದ್ರಕ್ಕೆ ಗುಣಮಟ್ಟದ ರೋಗ ನಿರೋಧಕ ಮಾತ್ರೆಗಳಾಗಲಿ ಅಥವಾ ಔಷಧಗಳಾಗಲಿ ಪೂರೈಕೆಯಾಗುತ್ತಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ.
ಕೆಎಸ್ಎಪಿಎಸ್ ಗಮನಹರಿಸಲಿ: ಸರ್ಕಾರ ಈ ಬಗ್ಗೆ ಗಮನಹರಿಸಿ ಪ್ರತಿ ವರ್ಷಕ್ಕೆ ಒಂದು ಸಾವಿರ ಇಂಜೆಕ್ಷನ್ಗಳ ಅವಶ್ಯಕತೆ ಇದ್ದು, ಆದರೆ ಕೇವಲ 50 ಮಾತ್ರ ಪೂರೈಕೆ ಮಾಡುತ್ತಿದೆ. ಇದರಿಂದ ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು(ಕೆಎಸ್ಎಪಿಎಸ್) ಇವರು ಗಮನಹರಿಸಿ ಏಡ್ಸ್ ಪೀಡಿತ ರೋಗಿಗಳ ಸಂಖ್ಯೆ ಇನ್ನು ಕಡಿಮೆ ಮಾಡಬಹುದಾಗಿದೆ ಎಂಬುದು ಸಾರ್ವಜನಿಕರ ಅಂಬೋಣ. ವೈದ್ಯರನ್ನು ಹೊರತುಪಡಿಸಿ ಎಆರ್ಟಿ ಕೇಂದ್ರ ಗುತ್ತಿಗೆ ನೌಕರರಿಗೆ ನೀಡುವ ಸಂಭಾವನೆ ಹೆಚ್ಚಿಸುವಂತೆ ಒತ್ತಾಯ ಪಡಿಸುತ್ತಿದ್ದಾರೆ.