ಕವನ ಸಾಮಾಜಿಕ ಸಮಸ್ಯೆ ಬಿಂಬಿಸಲಿ
ರಾಯಚೂರು: ಸಾಹಿತಿಗಳು ಸಮಾಜದ ಜ್ವಲಂತ ಸಮಸ್ಯೆಗಳತ್ತ ಹೆಚ್ಚಿನ ಗಮನಹರಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ತಾಯರಾಜ್ ಮರ್ಚಟ್ಹಾಳ್ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಇತ್ತೀಚೆಗೆ ಯಲ್ಲಪ್ಪ ಮರ್ಚೆಡ್ ಅವರ ಕವನ ಸಂಕಲನ ಮಡಿಲು ಬಿಡುಗಡೆ ಹಾಗೂ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಮಸ್ಯೆಗಳ ಕರಾಳತೆಯ ಪ್ರಭಾವ ಹೆಚ್ಚಾಗುತ್ತಿದ್ದು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತಿಗಳಾದವರು ಸಮಾಜದಲ್ಲಿ ಜಾಗೃತಿ ಮೂಡಿಸುವಂಥ ಸಾಹಿತ್ಯ ರಚನೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಯುವಕವಿ ಯಲ್ಲಪ್ಪ ಮರ್ಚೆಡ್ ಅವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಜಯಣ್ಣ ಮಡಿಲು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇರಿರುವ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯುವಕವಿ ಯಲ್ಲಪ್ಪ ಯಶಸ್ಸು ಕಂಡಿದ್ದಾರೆಂದರು.
ಕವನ ಸಂಕಲನದ ಕುರಿತು ಎಸ್ಎಸ್ಎಂ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸಿ ಸಹಪ್ರಾಧ್ಯಾಪಕ ಪರಮೇಶ್ವರ ಸಾಲಿಮಠ ಮಾತನಾಡಿದರು. ಸಮಾರಂಭದಲ್ಲಿ ಚಂದ್ರಶೇಖರ್ ರೆಡ್ಡಿ, ಎಂ.ರಾಮಣ್ಣ, ಶರಣಪ್ಪ ಮ್ಯಾತ್ರಿ, ಅಬ್ದುಲ್ ಸತ್ತಾರ್, ಗಂಗಾಧರಸ್ವಾಮಿ, ಆಂಜಿನೇಯ್ಯ, ತಿಮ್ಮಪ್ಪ ಸೇರಿ ಅನೇಕರಿದ್ದರು.