ಬೇನಾಮಿ ಭೂಮಿ ನಿರ್ಗತಿಕರಿಗೆ ಕೊಡಿ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ ನಂ 288/5ರ ಎರಡು ಎಕರೆ ಬೇನಾಮಿ ಆಸ್ತಿಯಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ದಾಖಲೆಗಳನ್ನು ಪರೀಶೀಲಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಿರ್ಗತಿಕ ನಿವೇಶನರಹಿತ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕೆಂದು ದಲಿತ ಕುಟುಂಬಗಳು ಒತ್ತಾಯಿಸಿವೆ. ಗ್ರಾಪಂ ಮಾಜಿ ಸದಸ್ಯ ಕರೆಕಲ್ಲಪ್ಪ ಭಜಂತ್ರಿ, ಗದ್ದೆಮ್ಮ ಭಜಂತ್ರಿಮ ರೇಣುಕಮ್ಮ, ಜೂಗಪ್ಪ, ದುರುಗಪ್ಪ, ಮಹಾಂತಮ್ಮ, ಹುಲುಗಪ್ಪ, ಕೂಡ್ಲಪ್ಪ ಶಿವಸಿಂಪಿಗೇರ್, ನಾಗಪ್ಪ ಭಜಂತ್ರಿ ಮತ್ತಿತರರು ಮನವಿ ಮಾಡಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಇದ್ದರು.
ಇಂದಿನಿಂದ ಜಾತ್ರೆ
ರಾಯಚೂರು: ನಗರದ ಬೇರೂನ್ ಕಿಲ್ಲಾ (ಕೋಟೆ ಪ್ರದೇಶ)ದ ಕಲಕೋಟಿ ಶ್ರೀವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಡಿ.2ರಿಂದ ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಡಿ.2 ರಂದು ಬೆಳಗ್ಗೆ 11 ಗಂಟೆಗೆ ಬೇರೂನ್ ಕಿಲ್ಲಾದ ವರಕಟ್ಟೆ ಬಸವೇಶ್ವರ ದೇವಸ್ಥಾನದಿಂದ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಪುರವಂತರ ಸೇವೆ ಹಾಗೂ ಕಳಸಕುಂಭಗಳ ಮೆರವಣಿಗೆಯು ಕಲಕೋಟಿ ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ವೀರಭದ್ರ ದೇವರಿಗೆ ರುದ್ರಾಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 6.30 ಗಂಟೆಗೆ ದೀಪೋತ್ಸವ ನಡೆಯಲಿದ್ದು, ರಾತ್ರಿ 11 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿದೆ. ಡಿ.3 ರಂದು ಬೆಳಗ್ಗೆ 5.30 ಗಂಟೆಗೆ ನೂತನ ಕಳಸಾರೋಹಣ ಹಾಗೂ ಬೆಳಗ್ಗೆ 6 ಗಂಟೆಗೆ ಅಗ್ನಿಪ್ರವೇಶ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ. ಡಿ.3 ರಂದು ಸಂಜೆ 6 ಗಂಟೆಗೆ ದೇವಸ್ಥಾನದಿಂದ ಕಿಲ್ಲೆ ಬ್ರಹನ್ಮಠಕ್ಕೆ ಉಚ್ಚಾಯ ತಲುಪಿ ಮರಳಲಿದ್ದು, ನಂತರ ಮಹಾಮಂಗಳಾರತಿ ನಡೆಯಲಿದೆ.
'ಗೊಂದಲ ನಿವಾರಿಸಿ'
ಲಿಂಗಸ್ಗೂರು: ಹೈದ್ರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ವಾಸಸ್ಥಳ ಪ್ರಮಾಣ ಪತ್ರದ ಕುರಿತು ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಮತ್ತು ವಿದ್ಯಾರ್ಥಿಗಳು ಶಾಲಾ-ಕಾಲೇಜು ಪ್ರವೇಶಕ್ಕೆ ಅರ್ಜಿ ಹಾಕಲು 371(ಜೆ) ಕಾಯ್ದೆಯ ಪ್ರಕಾರ ವಾಸಸ್ಥಳ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಪ್ರಸ್ತುತ ಬಿಇಡಿ ಪ್ರವೇಶಕ್ಕಾಗಿ ಸರ್ಕಾರಿ ಕೋಟಾದಡಿ ಆಯ್ಕೆ ಬಯಸುವವರಿಗೆ ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಸಲ್ಲಿಸಲು ಡಿ.5ರಂದು ಕಡೆಯ ದಿನ. ಸರ್ಕಾರ ಬಿಡುಗಡೆಗೊಳಿಸಿದ ವಾಸಸ್ಥಳ ಪ್ರಮಾಣ ಪತ್ರದ ನಮೂನೆ-12 ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಈ ಭಾಗದ ಪ್ರಮಾಣ ಪತ್ರ ವಿತರಿಸುವ ಸಕ್ಷಮ ಪ್ರಾಧಿಕಾರ ತಹಸೀಲ್ದಾರರಿಗೆ ನೀಡಲಾಗಿದೆ. ಆದರೆ ತಹಸೀಲ್ದಾರರು ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲವೆಂದು ಹಿಂಬರೆಹ ನೀಡುತ್ತಿದ್ದಾರೆ ಎಂದಿದ್ದಾರೆ.
ಶಿಕ್ಷಕ ಬಸವರಾಜ ಅಂಗಡಿಗೆ ಕರವೇ ರಾಜ್ಯೋತ್ಸವ ಪ್ರಶಸ್ತಿ
ಸಿಂಧನೂರು: ನಗರದ ಸುಕಾಲಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಅಂಗಡಿ ಅವರಿಗೆ ಕರವೇಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ ಮತ್ತು ಉಚಿತ ನೇತ್ರ ಚಿಕಿತ್ಸಾ ಶಿಬಿರದ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿಕ್ಷಕ ಅಂಗಡಿಯವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಲಿಂಗಸ್ಗೂರು ತಿಮ್ಮಾಪುರದ ಕಲ್ಯಾಣಶ್ರಮದ ಸ್ವಾಮೀಜಿ ಮಹಾಂತ ಸ್ವಾಮೀಜಿ ಸಾಲಿಮಠ ಮುದಗಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕರವೇ ಜಿಲ್ಲಾ ಅಧ್ಯಕ್ಷ ವಿನೋದ ರೆಡ್ಡಿ, ಪತ್ರಕರ್ತ ಡಿ.ಎಚ್. ಕಂಬಳಿ, ಕರವೇ ತಾಲೂಕಾಧ್ಯಕ್ಷ ಎಚ್.ಗಂಗಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಭಿನಂದನೆ: ಶಿಕ್ಷಕರ ಈ ಸಾಧನೆಗೆ ಬಿಇಒ ಅಮರಪ್ಪ ಭೋವಿ, ಕ್ಷೇತ್ರ ಸಮನ್ವಯಾಧಿಕಾರಿ ವಿರೂಪಾಕ್ಷಪ್ಪ ಹುನುಗುಂದ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಹನುಮೇಶ, ಕನಕನಗರ ಸಿಆರ್ಪಿ ವೀರೇಶ ಗೋನವಾರ, ಶಾಲಾ ಮುಖ್ಯೋಪಾಧ್ಯಾಯ ಅನಂತರಾವ್, ಕರಾಪ್ರಾಶಾಶಿ ಸಂಘದ ಕಾರ್ಯದರ್ಶಿ ಕೆ.ಮಲ್ಲಪ್ಪ ಅಭಿನಂದಿಸಿದ್ದಾರೆ.