ವೀರೇಶಪ್ಪ ಮೇಲೆ ಹಲ್ಲೆ; ಕ್ರಮಕ್ಕೆ ಡಿಎಸ್‌ಎಸ್ ಆಗ್ರಹ
ಕನ್ನಡಪ್ರಭ ವಾರ್ತೆ, ಸಿಂಧನೂರು, ಡಿ.1
ನಗರದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಕಾಂಗ್ರೆಸ್ ಮುಖಂಡ ವೀರೇಶಪ್ಪ ಮಾಡಸಿರವಾರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಹಸೀಲ್ದಾರ್ ಮೂಲಕ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನ.28ರಂದು ಕಚೇರಿಯ ಸಮಯದಲ್ಲಿ ವೀರೇಶಪ್ಪ ಅವರ ಮೇಲೆ ಕೆಲವು ಪುಂಡರು ವ್ಯವಸ್ಥಿತವಾಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಅರೆಬೆತ್ತಲೆಗೊಳಿಸಿ ವಿಕೃತಿಯನ್ನು ತೋರಿಸಿದ್ದಾರೆ. ಅಮಾನುಷವಾಗಿ ವರ್ತಿಸಿದವರ ಮೇಲೆ ಗೂಂಡಾ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಡಿಸಬೇಕು. ಹಲ್ಲೆಗೊಳಗಾದ ವೀರೇಶಪ್ಪ ಅವರಿಗೆ ಸೂಕ್ತ ರಕ್ಷಣೆ ಒದಗಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಆರ್‌ವೈಎಫ್‌ಐ ಖಂಡನೆ: ಕಾಂಗ್ರೆಸ್ ಮುಖಂಡ ವೀರೇಶಪ್ಪ ಮಾಡಶಿರವಾರ ಮೇಲೆ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ತಾಲೂಕಾಧ್ಯಕ್ಷ ಲಿಂಗರಾಜ ಹೊಸಳ್ಳಿ ಮತ್ತವರ ಗೂಂಡಾ ಪಡೆ ನಡೆಸಿದ ಅಮಾನವೀಯ ಹಲ್ಲೆಯನ್ನು ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಅಧ್ಯಕ್ಷ ಎಂ.ಗಂಗಾಧರ ಹಾಗೂ ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಹಾಡಹಗಲೇ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹಿಗ್ಗಾಮುಗ್ಗ ಥಳಿಸಿ, ಚಪ್ಪಲಿಯಿಂದ ಹೊಡೆದು ಬಟ್ಟೆ ಹರಿದು ಹಾಕಿ ಅರೆಬೆತ್ತಲೆ ಮಾಡಿ ಹೀನಾಯವಾಗಿ ಹಲ್ಲೆ ನಡೆಸಿ ಗೂಂಡಾ ಪ್ರವೃತ್ತಿಯನ್ನು ನಡೆಸಿದವರ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.