ಶಾಸಕರಿಂದ ವಾರ್ಡ್ ರಸ್ತೆ ವೀಕ್ಷಣೆ
ಸಿಂಧನೂರು: ನಗರದ ವಿವಿಧ ವಾರ್ಡ್ಗಳ ರಸ್ತೆಗಳು ಹದಗೆಟ್ಟ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಮರಂ ಹಾಕಿ ಸಮತಟ್ಟುಗೊಳಿಸುವ ಕಾರ್ಯ ನಡೆದಿದ್ದು, ಶಾಸಕ ಹಂಪನಗೌಡ ಬಾದರ್ಲಿ ಭಾನುವಾರ ಮಹೆಬೂಬಿಯಾ ಕಾಲೋನಿ, ಕೋರ್ಟ್ ಮುಂಭಾಗದ ರಸ್ತೆ, ಆದರ್ಶ ಕಾಲೋನಿ ಸೇರಿದಂತೆ ಇನ್ನಿತರ ವಾರ್ಡ್ಗಳಿಗೆ ಭೇಟಿ ನೀಡಿ ರಸ್ತೆಗಳನ್ನು ವೀಕ್ಷಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
ಆದರ್ಶ ಕಾಲೋನಿಯ ನಿವಾಸಿಯೊಬ್ಬರು ತಮ್ಮ ವಾರ್ಡ್ನಲ್ಲಿ ರಸ್ತೆಗೆ ಮರಂ ಹಾಕಲಾಗಿದೆ. ರಸ್ತೆಯೇನೋ ಸಮತಟ್ಟಾಗಿದೆ. ಆದರೆ ಮಳೆ ಬಂದರೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆ ಮಧ್ಯೆ ನೀರು ನಿಂತು ಮತ್ತಷ್ಟು ಹದಗೆಡುತ್ತಿದೆ ಎಂದು ಶಾಸಕರ ಗಮನ ಸೆಳೆದರು.
ಹಂತಹಂತವಾಗಿ ಸಮಸ್ಯೆ ಪರಿಹಾರ: ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಂಪನಗೌಡ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಈಗಾಗಲೇ ಭರದಿಂದ ಕೆಲಸ ಪ್ರಾರಂಭಿಸಲಾಗಿದೆ. ಬರುವ ದಿನಗಳಲ್ಲಿ ಒಂದೊಂದೇ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಕೆಲವು ಕಡೆ ಖಾಲಿ ಪ್ಲಾಟ್ಗಳನ್ನು ಮಾಲೀಕರು ಹಾಗೆ ಬಿಟ್ಟಿರುವುದರಿಂದ ಅಲ್ಲಿ ಚರಂಡಿ ನೀರು ನಿಂತು, ಬೇಲಿ ಬೆಳೆದು ಸುತ್ತಮುತ್ತಲಿನ ಪ್ರದೇಶದಲ್ಲಿ ಕಲುಷಿತ ವಾತಾವರಣ ಉಂಟಾಗಿದೆ. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಶಾಸಕರ ಗಮನ ಸೆಳೆದರು.
ಈ ವೇಳೆ ನಗರಸಭೆ ಸದಸ್ಯರಾದ ಪ್ರಭುರಾಜ, ಶೇಖರಪ್ಪ ಗಿಣಿವಾರ, ನಬಿಸಾಬ, ಕಾಂಗ್ರೆಸ್ ಮುಖಂಡರಾದ ಶಿವಪ್ಪ ಜವಳಿ, ಮಲ್ಲನಗೌಡ ಗುಂಜಳ್ಳಿ, ಎಸ್.ಶರಣೇಗೌಡ, ಖಾಜಿಮಲಿಕ್, ನನ್ನುಸಾಬ ಮೇಸ್ತ್ರಿ ಇನ್ನಿತರರು ಇದ್ದರು.
ರೈತನ ಸಾವಿಗೆ ಬಿಜೆಪಿ, ಜೆಡಿಎಸ್ ಹೊಣೆ
ಸಿಂಧನೂರು: ಬೆಳಗಾವಿ ಸುವರ್ಣಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ್ ಅರಭಾವಿ ಸಾವಿಗೆ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಆಡಳಿತವೇ ಹೊಣೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ.25ರಂದು ಕಬ್ಬಿಗೆ 2,650 ಬೆಂಬಲ ಬೆಲೆ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಎರಡು ದಿನದ ನಂತರ ರೈತ ಸಾಯುತ್ತಾನೆಂದರೆ ಇದು ವಿಪರ್ಯಾಸ ಎಂದರು.
ಈ ಘಟನೆ ಹಿಂದೆ ಬೇರಾವುದೋ ಕಾಣದ ಕೈಗಳ ಕೆಲಸ ನಡೆದಿದೆ. ಮೃತ ರೈತನ ಮರಣೋತ್ತರ ಪರೀಕ್ಷೆ ವರದಿ ಸರ್ಕಾರದ ಕೈಸೇರಿದರೆ ನಿಜಾಂಶ ಗೊತ್ತಾಗುತ್ತದೆ. ಸಾವಿನ ಬಗ್ಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದರು.