ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ: ವಿರೂಪಾಕ್ಷಪ್ಪ
ಕ.ಪ್ರ.ವಾರ್ತೆ, ಮಸ್ಕಿ, ಡಿ.1
ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಭಾನುವಾರ ಶ್ರೀಕನಕದಾಸರ ಜಯಂತ್ಯುತ್ಸವ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭಕ್ಕೆ ಚಾಲನೆ ನೀಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂಬ ಉದ್ದೇಶದಿಂದಲೇ ಎಲ್ಲ ಕ್ಷೇತ್ರಗಳಲ್ಲಿರುವ ಕುರುಬ ಸಮಾಜದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂದರು.
ಪ್ರಾದೇಶಿಕವಾಗಿಯೂ ಸಮಾಜ ತನ್ನ ಒಗ್ಗಟ್ಟನ್ನು ಬೆಳೆಸಿಕೊಳ್ಳುವುದರೊಂದಿಗೆ ಅಧಿಕಾರ ಪಡೆಯುವ ಚಿಂತನೆ ಮಾಡಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಆದ್ದರಿಂದ ಸಮಾಜದವರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಮನವಿ ಮಾಡಿದರು.
ಕುರುಬ ಸಮಾಜದ ಮುಖಂಡ ಸಂಗಣ್ಣ ಬಯ್ಯಾಪೂರ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 12 ಜನ ಕುರುಬ ಸಮಾಜದವರು ಶಾಸಕರಿದ್ದಾರೆ. ಆದರೆ ಅವರನ್ನು ಸಂಪುಟಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸೇರ್ಪಡೆಗೊಳಿಸಿಲ್ಲ. ಆದರೂ ಅವರನ್ನು ಜಾತಿ ರಾಜಕಾರಣಿ ಎಂದು ಟೀಕಿಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಶಾದಿಭಾಗ್ಯ ಯೋಜನೆ ಪ್ರಕಟಿಸಿರುವ ಸಿದ್ದರಾಮಯ್ಯನವರು ಜಾತಿ ರಾಜಕಾರಣ ಮಾಡುತ್ತಿರುವವರೆಂದು ವಥಾ ಆರೋಪಿಸ ಲಾಗುತ್ತಿದೆ. ಅವರು ಕುರುಬ ಸಮಾಜದವರಿಗಾಗಿ ಆ ಯೋಜನೆಯನ್ನು ಪ್ರಕಟಿಸಿದ್ದರೆ ಮಾತ್ರ ಅದು ಜಾತಿ ರಾಜಕಾರಣ ವಾಗುತ್ತಿತ್ತು ಎಂದರು.
ಕಳೆದ ಸರ್ಕಾರದ ಅವಧಿಯಲ್ಲಿ ವಿವಿಧ ಮೇಲ್ವರ್ಗದ ಮಠಗಳಿಗೆ ನೂರಾರು ಕೋಟಿ ಅನುದಾನ ಬೇಕಾಬಿಟ್ಟಿಯಾಗಿ ಹಂಚ ಲಾಗಿತ್ತು. ಆಗ ಹಿಂದುಳಿದ ಜನಾಂಗಕ್ಕೆ ಸೇರಿದ ಮಠಗಳಿಗೆ ಪ್ರಾಮುಖ್ಯತೆಯನ್ನೇ ನೀಡಿರಲಿಲ್ಲ ಎಂದು ಅವರು ಟೀಕಿಸಿ,
ಪೇಜಾವರ ಶ್ರೀಗಳು ಕುರುಬರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ ಹೇಳುತ್ತಿದ್ದು, ಶೈವರಾದ ಕುರುಬರು ವೈಷ್ಣವ ದೀಕ್ಷೆ ಪಡೆಯಲು ಪೇಜಾವರಶ್ರೀಗಳ ಬಳಿ ತೆರಳಿ ಮನವಿ ಮಾಡಿಲ್ಲ ಎಂದರು.
ಜಿಪಂ ಸದಸ್ಯರಾದ ಮಹಾದೇವಪ್ಪಗೌಡ, ವೀರೇಶ ಸಾಲೋಣಿ, ಡಿವೈಎಸ್ಪಿ ಅನಿತಾ ಹದ್ದಣ್ಣವರ, ಮಾಜಿ ಜಿಪಂ ಉಪಾಧ್ಯಕ್ಷ ಪಾಮಯ್ಯ ಮುರಾರಿ, ನಿರುಪಾದಿ ವಕೀಲ, ಚಿದಾನಂದ ಗುರುವಿನ್ ಮಾತನಾಡಿದರು.
ಗಬ್ಬೂರಿನ ಸಿದ್ದಯ್ಯತಾತನವರು, ತುರ್ವಿಹಾಳದ ಚಿದಾನಂದಯ್ಯ ತಾತನವರು ಸಾನಿಧ್ಯವಹಿಸಿದ್ದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಕೆ.ಕರಿಯಪ್ಪ, ಮಸ್ಕಿ ವಿಧಾನಸಭಾ ಕ್ಷೇತ್ರದ ಕುರುಬ ಸಂಘದ ಅಧ್ಯಕ್ಷ ಮಳ್ಳಪ್ಪ ಪೂಜಾರಿ, ಜಿಪಂ ಸದಸ್ಯರಾದ ಎಚ್.ಬಿ.ಮುರಾರಿ, ಬಸಮ್ಮ ಕುಂಟೋಜಿ ಹಾಗೂ ಪ್ರಸನ್ನ ಪಾಟೀಲ, ಶ್ರೀಶೈಲಪ್ಪ ಬ್ಯಾಳಿ, ಎಂ. ದೊಡ್ಡ ಬಸವರಾಜ, ರಮೇಶಪ್ಪ ಸಾಹುಕಾರ, ತಾಪಂ ಸದಸ್ಯರಾದ ನೀಲಮ್ಮ ಮರಳದ, ಅಶೋಕ ಸದಲಗ ಮತ್ತಿತರರಿದ್ದರು.
ಪಟ್ಟಣ ಸೇರಿ ಲಿಂಗಸ್ಗೂರು, ಸಿಂಧನೂರು, ಮಾನ್ವಿ, ತಾಲೂಕುಗಳಿಂದ ಆಗಮಿಸಿದ್ದ ನೂರಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.