ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನ್ನಡತನಕ್ಕೆ ಅವಮಾನವಾದಲ್ಲಿ ಸಿಡಿದೇಳಿ

Vishwanath S
Updated On : 3 Dec 2013, 11:29 am

ಸಿಂಧನೂರು: ಸಹಬಾಳ್ವೆ, ಪರಭಾಷೆ ಸಹಿಷ್ಣುತೆಗೆ ಹೆಸರಾಗಿರುವ ಕನ್ನಡ ನಾಡು, ಭಾಷೆ ಹಾಗೂ ಕನ್ನಡತನಕ್ಕೆ ಆಗುವ ಅವಮಾನ, ನಿಂದನೆಯನ್ನು ಕನ್ನಡಿಗರು ಎಂದಿಗೂ ಸಹಿಸಬಾರದು ಎಂದು ಉಪನ್ಯಾಸಕ ರಾಮಣ್ಣ ಹಿರೇಬೇರಿಗಿ ಕರೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕರವೇ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಹಾಗೂ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬೇರೆ ಬೇರೆ ಭಾಷಿಕರು ಕನ್ನಡ ನಾಡಿನಲ್ಲಿ ನೆಲೆಗೊಂಡಿದ್ದರೂ ಕನ್ನಡಿಗರು ಸಹೋದರತ್ವ ಭಾವನೆಯಿಂದ ವರ್ತಿಸುತ್ತಿದ್ದಾರೆ. ಆದರೂ ಬೆಳಗಾವಿಯಲ್ಲಿ ಎಂಇಎಸ್‌ನ ಹಾವಳಿಯಿಂದ ಕನ್ನಡಿಗರು ನೆಮ್ಮದಿಯಿಂದ ಜೀವನ ಮಾಡುವಂತಿಲ್ಲ. ಪಕ್ಷ, ಜಾತಿ ಹಾಗೂ ಧರ್ಮಭೇದ ಮರೆತು ಕನ್ನಡತನವನ್ನು ಉಳಿಸಬೇಕಾದ ಸಂದರ್ಭದಲ್ಲಿ ಈಗ ಒದಗಿ ಬಂದಿದೆ. ಕನ್ನಡ ಆಡಳಿತ ಭಾಷೆಯಾಗಬೇಕು. ನಾಡಿನ ಬುದ್ಧಿಜೀವಿಗಳು ಕನ್ನಡಿಗರ ಅಭಿವೃದ್ಧಿಗೆ ನೀಡಿದ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರರು ಮಾತನಾಡಿದರು. ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ, ಕೆ.ಕರಿಯಪ್ಪ, ಬಾಬರ್‌ಪಾಷ ವಕೀಲ, ಜಿಲ್ಲಾ ಸಂಚಾರಿ ನೇತ್ರ ಘಟಕದ ಡಾ. ಪ್ರಣತಿ, ಎಸ್.ಗ್ಯಾನಪ್ಪ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು. ಎಸ್.ದೇವೇಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement