ಬೋಧಕರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ
ರಾಯಚೂರು: ತಾಲೂಕಿನ ಜಾಗೀರವೆಂಕಟಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಬೋಧಕರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿವಿಧ ವಿಷಯಗಳ ಶಿಕ್ಷಕರನ್ನು ನೇಮಕ ಮಾಡುವಲ್ಲಿ ಮುಖ್ಯಗುರುಗಳು ಬೇಜವಬ್ದಾರಿ ತೋರಿದ್ದು, ಶಾಲೆ ಪ್ರಾರಂಭದಿಂದ ಈವರೆಗೆ ತಾತ್ಕಾಲಿಕವಾಗಿ 2008ರಿಂದ ಶಿಕ್ಷಕಿಯೊಬ್ಬರು ಗಣಿತ ಮಾತ್ರ ಬೋಧಿಸುತ್ತಿದ್ದಾರೆ. ವಿಜ್ಞಾನ ಮತ್ತು ಇಂಗ್ಲಿಷ್ ವಿಷಯ ಬೋಧಕರು ಇಲ್ಲ. ಪ್ರಮುಖವಾದ ಸದರಿ ವಿಷಯಗಳಿಗೆ ಶಿಕ್ಷಕರಿಲ್ಲದೆ ವ್ಯಾಸಂಗ ಮಾಡುವ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ.
ಅಲ್ಲದೆ ಕೆಲ ತಿಂಗಳಿಂದ ಶಾಲಾ ಮೇಲುಸ್ತುವಾರಿ ಸಮಿತಿ ರಚನೆ ಮಾಡದೆ ಮನಬಂದಂತೆ ವರ್ತಿಸುತ್ತಿದ್ದು, ಗ್ರಾಮದ ಮುಖಂಡರು, ಪೋಷಕರು ಹಾಗೂ ವಿದ್ಯಾವಂತರು ಶಾಲಾ ಸುಧಾರಣೆಯ ಬಗ್ಗೆ ಕೇಳಿದರೆ ಮುಖ್ಯಗುರುಗಳು ಅನಾಗರಿಕರಂತೆ ವರ್ತಿಸುತ್ತಾರೆ. ಇವರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದೆ ಸರ್ಕಾರದ ಕಾನೂನು ಉಲ್ಲಂಘನೆ ಮಾಡಿ ರಾಜಕೀಯ ನೀತಿ ಅಳವಡಿಸಿಕೊಂಡು ಮೋಸ ಮಾಡುತ್ತಿದ್ದಾರೆಂದು ದೂರಿದ್ದಾರೆ.
ಕೂಡಲೇ ಶಾಲೆಗೆ ಭೇಟಿ ನೀಡಿ ಮಕ್ಕಳ ಹಾಗೂ ಗ್ರಾಮಸ್ಥರೊಂದಿಗೆ ವಿಚಾರಿಸಿ ಸದರಿ ಶಾಲೆಯ ನಿಜ ಸಂಗತಿ ಅರಿತು ವಿವಿಧ ವಿಷಯಗಳ ಬೋಧಕರನ್ನು ನೇಮಕ ಮಾಡುವ ಜೊತೆಗೆ ಮುಖ್ಯಗುರುಗಳು ಹಾಗೂ ಕೆಲ ಶಿಕ್ಷಕರನ್ನು ವರ್ಗಾವಣೆ ಮಾಡಿ ಉತ್ತಮ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಗ್ರಾಪಂ ಸದಸ್ಯ ನಾರಾಯಣ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಶಿವಪುರ, ಗುರುಪಾದ ಸಾಹುಕಾರ ಅಂಗಡಿ, ಕೆ.ಶರಣಪ್ಪ ಸೇರಿದಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.