ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಾಠಿ ಪ್ರಹಾರ; ಮಹಿಳಾ ಪೇದೆ, ಗರ್ಭಿಣಿಗೆ ಗಾಯ

Vishwanath S
Updated On : 3 Dec 2013, 11:28 am

ಕ.ಪ್ರ. ವಾರ್ತೆ , ರಾಯಚೂರು ,ಡಿ.2
ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ವಿತರಣೆ, ಕಲ್ಲಿನ ಅಕ್ರಮ ಗಣಿಗಾರಿಕೆ ತಡೆಯುವಂತೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಅನೇಕರಿಗೆ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಸೇರಿದಂತೆ 16 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಸವಿತಾ ಎಂಬುವವರಿಗೆ ಗಾಯವಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗರ್ಭಿಣಿಯೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಾನವಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಲ್ಲಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಗಣಿಗಾರಿಕೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಘ ಮಾಡಿದ್ದ ಮನವಿಗೆ ಬೆಲೆ ನೀಡಿಲ್ಲ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ನೂರಾರು ಕಾರ್ಯಕರ್ತರು ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು.
ಲಾಠಿ ಪ್ರಹಾರ: ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ವಾಗ್ವಾದ ಮತ್ತು ನೂಕಾಟ ನಡೆಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಉದ್ರಿಕ್ತರನ್ನು ಹೊರಹಾಕಲು ಪೊಲೀಸರು ಬೆನ್ನಟ್ಟಿ ಲಾಠಿ ಪ್ರಹಾರ ಮಾಡಿದರು.
ಡಿಸಿ ಕಚೇರಿ ಮುಂಭಾಗದಲ್ಲಿ ಹಾಕಿದ್ದ ಶಾಮಿಯಾನ ಕಿತ್ತು ಹಾಕಲಾಯಿತು. ಘಟನೆಯಲ್ಲಿ ಮಹಿಳಾ ಪೇದೆ ಸೇರಿದಂತೆ ರೈತ ಸಂಘದ ಅನೇಕರಿಗೆ ಗಾಯಗಳಾಗಿವೆ.
ಬಂಧನ: ಉದ್ರಿಕ್ತರನ್ನು ಲಾಠಿ ಪ್ರಹಾರ ನಡೆಸಿದ ಪೊಲೀಸರು ಅದೇ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಮಾನಸಯ್ಯ ಸೇರಿದಂತೆ 16 ಜನರನ್ನು ಬಂಧಿಸಿ ಕರೆದೊಯ್ದರು. ಈ ಮಧ್ಯೆ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾ ಕಾರರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಅಲ್ಲಿಂದ ಉದ್ರಿಕ್ತರನ್ನು ಲಾಠಿ ಬೀಸಿ ಚದುರಿಸಿದರು.
ಬೇಡಿಕೆಗಳು: ಇದಕ್ಕೂ ಮೊದಲು ಪಿಜಿ ಸೆಂಟರ್ ಸ್ಥಾಪನೆಗೆ ರೈತರಿಂದ ಫಲವತ್ತಾದ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದೆ. ಆದರೆ 20 ವರ್ಷಗಳಿಂದ ರೈತರಿಗೆ ಪರಿಹಾರ ನೀಡಿಲ್ಲ. ಬಳಕೆಯಾಗದೇ ಉಳಿದ ಜಮೀನನ್ನು ರೈತರಿಗೆ ಕೂಡಲೇ ಪರಿಹಾರ ಸಮೇತ ಹಿಂದಿರುಗಿಸಬೇಕು. ಜಿಲ್ಲೆಯ ವಿವಿಧೆಡೆ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡಿರುವ ಬಡವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದರು.
ಜಿಲ್ಲೆಯ ಎಲ್ಲೆಡೆ ಅಕ್ರಮವಾಗಿ ನಡೆಸುತ್ತಿರುವ ಕಲ್ಲಿನ ಗಣಿಗಾರಿಕೆ ತಡೆಯಬೇಕು. ಹಟ್ಟಿ ಚಿನ್ನದ ಗಣಿಯ ಸೈನೈಡ್ ಬೂದಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಾಗಬೇಕು. ನಗರದ ಆಶ್ರಯ ಕಾಲನಿ, ಸಿಯಾತಲಾಬ್, ರಾಜೀವನಗರದ ನಿವಾಸಿಗಳಿಗೆ ಹಕ್ಕುಪತ್ರಕ್ಕೆ ಒತ್ತಾಯಿಸಿದರು.
ಸಿಂಧನೂರಿನ ನಿಡಿಗೋಳದಲ್ಲಿ ಭೂಮಿ ಕಳೆದುಕೊಂಡ ಹರಿಜನ, ನಾಯಕ ಜನಾಂಗದವರಿಗೆ ತಹಸೀಲ್ದಾರ್ ಜಮೀನು ಗುರುತಿಸಿದ್ದು ಅಲ್ಲಿ ಸಾಗುವಳಿಗೆ ನೀಡಬೇಕು. ಜವಳಗೇರಾ ನಾಡಗೌಡರ 3600 ಎಕರೆ ಹೆಚ್ಚುವರಿ ಜಮೀನನ್ನು ಭೂಹೀನರಿಗೆ ಹಂಚಿಕೆ ಮಾಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಲಾಯಿತು.
ಬಂದೋಬಸ್ತ್: ನಗರದಲ್ಲಿ ಸೋಮವಾರ ನಡೆದ ಲಾಠಿ ಪ್ರಹಾರದ ಘಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಕಾವಲು ಹಾಕಲಾಗಿತ್ತು.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ, ಜಿಲ್ಲಾಧ್ಯಕ್ಷ ಕೆ. ನಾಗಲಿಂಗಸ್ವಾಮಿ, ಮುದುಕಪ್ಪ ನಾಯಕ, ಶೇಖರಯ್ಯ, ರಮೇಶ್ ಪಟೇಲ್, ಅಶೋಕ ನೀಲಗಲ್, ನೂರಜಾ ಸೇರಿ ಅನೇಕರಿದ್ದರು.
ಐವರ ವಿರುದ್ಧ ಕ್ರಿಮಿನಲ್ ಕೇಸ್
ಮುದಗಲ್: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಭೂತವನ್ನು ಬೆನ್ನಟ್ಟಿರುವ ತಾಲೂಕಾಡಳಿತ ಕೊನೆಗೂ 5 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ನಾಗರಹಾಳದ ಮಹ್ಮದ್ ಸರಫರಾಜ್, ಬಯ್ಯಾಪುರದ ಬಸನಗೌಡ ಸಿದ್ದನಗೌಡ ಬಯ್ಯಾಪೂರ, ಮಾಕಾಪುರದಲ್ಲಿನ ಶಿವರುದ್ರಪ್ಪ ಸಂಗಪ್ಪ, ಲಕ್ಷ್ಮಣ ಚನ್ನಪ್ಪ, ಗಣಪತಿ ಭೋಜಪ್ಪ ಅವರ ಮೇಲೆ ಕಂದಾಯ ಇಲಾಖೆ ನೀಡಿದ ದೂರಿನನ್ವಯ ಪ್ರಖರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಣಿಗಾರಿಕೆ ಪ್ರದೇಶಗಳಲ್ಲಿ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದರಿಂದ ಪ್ರಖರಣ ದಾಖಲಾಗಿದೆ.
ತನಿಖೆ ಚುರುಕು: ತಾಲೂಕಿನ ಮುದಗಲ್, ಮಾಕಾಪುರ, ಬಯ್ಯಾಪುರ ಹಾಗೂ ನಾಗರಹಾಳ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ದಾಖಲಾದ ಪ್ರಖರಣಕ್ಕೆ ಸಂಬಂಧಿಸಿದಂತೆ ಲಿಂಗಸ್ಗೂರು ಪೊಲೀಸ್ ಉಪವಿಭಾಗಾಧಿಕಾರಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಸೋಮವಾರ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಗಳ ಪರಿಶೀಲನೆ ಮೂಲಕ ತನಿಖೆ ಚುರುಗೊಂಡಿದೆ.
ಅಕ್ರಮ ಕಲ್ಲು ಗಣಿಗಾರಿಕೆ ಪ್ರಖರಣ ದಾಖಲಾಗುತ್ತಿದ್ದಂತೆ ಮಾಕಾಪುರದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಗಿತಗೊಳಿಸಿ ಮಾಲೀಕರು ಪಲಾಯನಗೈದಿದ್ದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸ್ ಇಲಾಖೆಯ ತನಿಖೆಯಿಂದ ಅಕ್ರಮ ಕಲ್ಲು ಗಣಿಗಾರಿಕೆಯ ಸತ್ಯಾಸತ್ಯತೆ ಹೊರಬೀಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement