ಆರೋಗ್ಯ ಕ್ಷೇತ್ರದ ಪ್ರಗತಿಗೆ ಸೇವಾ ಮನೋಭಾವ ಅಗತ್ಯ
ರಾಯಚೂರು: ಜಿಲ್ಲೆಯ ಸಮಗ್ರ ಪ್ರಗತಿ ನಿಟ್ಟಿನಲ್ಲಿ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪೂರಕವಾಗಿ ಸೇವಾ ಮನೋಭಾವನೆಯ ಕಾರ್ಯಗಳ ಆಯೋಜನೆ ಅವಶ್ಯಕ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸಲಹೆ ನೀಡಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಲಯನ್ಸ್ ಕ್ಲಬ್, ಬೆಂಗಳೂರಿನ ವಿವೇಕಾನಂದ ಸೇವಾಶ್ರಮ, ಸುರಕ್ಷಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರ ನಿಯಂತ್ರಣ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ್ದ ಕಣ್ಣಿನ ಬೃಹತ್ ಉಚಿತ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬದುಕಿನಲ್ಲಿ ಬೆಳಕು: ಮಾನವನ ಪ್ರಮುಖ ಅಂಗಗಳಲ್ಲಿ ಕಣ್ಣು ಪ್ರಮುಖವಾದವು. ಕಣ್ಣಿಗೆ ಅತೀ ಹೆಚ್ಚಿನ ಮಹತ್ವವಿದೆ. ದೃಷ್ಟಿ ದೋಷದಿಂದ ಸಹಜ ಬದುಕು ನಿರ್ವಹಣೆ ಕಷ್ಟಕರ. ಇಂಥ ದೋಷ ಹೊಂದಿದವರ ಬದುಕಿನಲ್ಲಿ ಬೆಳಕು ಮೂಡಿಸುವ ಕಾರ್ಯ ಲಯನ್ಸ್ ಕ್ಲಬ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪ್ರತಿವರ್ಷ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಜಿಲ್ಲೆಯ ವಿವಿಧೆಡೆ ಗಡ್ಡಾಲೆ ವೆಂಕೋಬರಾವ್ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಿರುವುದು ಇನ್ನುಳಿದ ಸಂಘ ಸಂಸ್ಥೆಗಳಿಗೆ ಮಾದರಿ ಕಾರ್ಯವಾಗಿದೆ. ಇಂಥ ಉದಾರ ಮನಸಿನ ವ್ಯಕ್ತಿಗಳಿಂದ ಸಮಾಜಕ್ಕೆ ನಾನಾ ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಡಾ. ಮುದ್ದುಮೋಹನ್ ಮಾತನಾಡಿ, ಜಿಲ್ಲೆಯ ಆರೋಗ್ಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಕಾರ್ಯ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮರ್ಪಕ ಸೇವೆ: ಲಯನ್ಸ್ ಕ್ಲಬ್ನ ಗವರ್ನರ್ ಪಿ. ನರಸಿಂಹ ರೆಡ್ಡಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕ್ಲಬ್ ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಾ ಸಾಗಿದ್ದು, ಬಡವರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಸಮರ್ಪಕ ಸೇವೆ ಒದಗಿಸುತ್ತಿದೆ ಎಂದು ಹೇಳಿ, ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಶಿವಪ್ರತಾಪ್ ವಹಿಸಿದ್ದರು. ಕ್ಲಬ್ ಕಾರ್ಯದರ್ಷಿ ಕೆ.ಕೃಷ್ಣ, ಎಸ್. ಕಮಲ್ ಕುಮಾರ್, ಎಂ.ಎನ್. ಮೂರ್ತಿ, ಡಾ. ಹನುಮಂತರಾವ್, ಡಾ. ಸುರೇಂದ್ರ ಬಾಬು, ವಿವೇಕಾನಂದ ಸೇವಾಶ್ರಮದ ಸಂಚಾಲಕ ವೆಂಕಟೇಶ ಮೂರ್ತಿ, ಕ್ಲಬ್ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ರೋಗಿಗಳ ಕಣ್ಣಿನ ಉಚಿತ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
--