ಕೋಟೆ ಉತ್ಸವ, ತಾಲೂಕು ಕೇಂದ್ರಕ್ಕೆ ಮನವಿ
ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣದ ಕೋಟೆ ಉತ್ಸವ ಮಾಡಬೇಕು, ತಾಲೂಕು ಕೇಂದ್ರಕ್ಕೆ ಎಲ್ಲ ರೀತಿಯಲ್ಲಿ ಅರ್ಹವಾಗಿದ್ದು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಕರವೇಯಿಂದ ಶಾಸಕ ಮಾನಪ್ಪ ವಜ್ಜಲ ಅವರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದಲ್ಲಿ ಪಪಂ ಹಮ್ಮಿಕೊಂಡ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ವಜ್ಜಲರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಿ ಮನವಿ ಸಲ್ಲಿಸಿದರು. ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಿ ತಾಲೂಕಾ ಕೇಂದ್ರವನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಮನವಿಯನ್ನು ಕರವೇ ಅದ್ಯಕ್ಷ ನಯೀಮ್, ಖಾದ್ರಿ ಸೇರಿದಂತೆ ಇನ್ನಿತರರು ಸಲ್ಲಿಸಿದರು.
ಮಾನವಹಕ್ಕು ದಿನಾಚರಣೆ: ಪೂರ್ವಭಾವಿ ಸಭೆ
ರಾಯಚೂರು: ಮಾನವ ಹಕ್ಕುಗಳ ದಿನಾಚರಣೆಯ ಆಯೋಜನೆ ಹಿನ್ನೆಲೆ ಈಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿತ್ತು.ಅಪರ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾನವ ಹಕ್ಕು ದಿನಾಚರಣೆಯನ್ನು ಡಿ.10ರಂದು ರಂಗಮಂದಿರದಲ್ಲಿ ಆಯೋಜಿಸಲು ಸಭೆ ನಿರ್ಧರಿಸಿತು. ಅಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ರಂಗಮಂದಿರದವರೆಗೆ ಮಾನವ ಹಕ್ಕುಗಳ ಕುರಿತು ಜಾಗೃತಿ ಏರ್ಪಡಿಸಲು ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ತಂಬಾಕು ಉತ್ಪನ್ನ ಅಧಿನಿಯಮ: ನಾಳೆ ಸಭೆ
ರಾಯಚೂರು: ತಂಬಾಕು ಉತ್ಪನ್ನಗಳ ಅಧಿನಿಯಮ 2003ರ ಕಾಯಿದೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಡಿ.5 ರಂದು ಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮ 2003ರ ಕಾಯ್ದೆಗೆ ಸಂಬಂಧಿಸಿ ಸಭೆ ಕರೆದಿದ್ದು, ಸಮಿತಿ ಸದಸ್ಯರು, ಅಧಿಕಾರಿಗಳು, ಎನ್ಜಿಒ ಪದಾಧಿಕಾರಿಗಳು ಭಾಗವಹಿಸಲು ಜಿಲ್ಲಾಧಿಕಾರಿ ಕಚೇರಿ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್
ಸಿಂಧನೂರು: ನಗರದ ವೆಂಕಟೇಶ್ವರ ಕಾಲೋನಿಯ ಶೆಡ್ಡೊಂದರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡು ಧವಸಧಾನ್ಯ ಸೇರಿದಂತೆ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ಶಿವಾನಂದಪ್ಪ, ಪಂಚಪ್ಪ, ಹಡಪದ ಹಾನಿಗೊಳಗಾದ ನತದೃಷ್ಟರು. ಅಗ್ನಿಶಾಮಕದಳದ ವಾಹನವು ಶೀಘ್ರಗತಿಯಲ್ಲಿ ಸ್ಥಳಕ್ಕೆ ಬಂದಿತಾದರೂ ಅಷ್ಟರೊಳಗೆ ಅನಾಹುತ ಸಂಭವಿಸಿತ್ತು. ಶಹರ್ ಠಾಣೆ ಪಿಎಸ್ಐ ಬಾಳನಗೌಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.