ಗಣಿಗಾರಿಕೆ: 6 ಜನರ ಮೇಲೆ ಪ್ರಕರಣ ದಾಖಲು
ಮುದಗಲ್: ಸೋಮವಾರ ಮಾಕಾಪೂರ, ನಾಗರಹಾಳ, ಸೇರಿದಂತೆ ವಿವಿಧಡೆ ಅಕ್ರಮ ಗಣಿಗಾರಿಗೆ ನಡೆಸಿದವರ ಮೇಲೆ ಪ್ರಕರಣ ದಾಖಲಾಗಿದ್ದು, ಮಂಗಳವಾರ ಮುದಗಲ್ ಹೊರವಲಯದಲ್ಲಿ ನಡೆದಿರುವ ಗಣಿಗಾರಿಕೆ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ಆರೋಪದಡಿಯಲ್ಲಿ 6 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.ಹೊರವಲಯದಲ್ಲಿ ಮಾಡುತ್ತಿರುವ ಗಣಿಗಾರಿಕೆ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಎಂಎಂಎಲ್ ಕಂಪನಿಗೆ ಸೇರಿದ ಸರ್ವೇ ನಂ. 618ರಲ್ಲಿ ಗಣಿಗಾರಿಕೆ ಮಾಡಿರುವುದು ತನಿಖಾ ತಂಡದಿಂದ ಸಾಬೀತಾಗಿದೆ. ಅಲ್ಲದೆ ಅಲ್ಲಿ ಕಲ್ಲು ಮಣ್ಣನ್ನು ಹಾಕಿದ್ದರಿಂದ ದಾವೂದ್ ತಂ. ಗೂಡುಸಾಬ, ಮಹಾಂತಗೌಡ ತಂ. ಮಲ್ಲನಗೌಡ, ಸಿದ್ರಾಮಪ್ಪ ತಂ. ಬಸಲಿಂಗಪ್ಪ, ರೇಖಪ್ಪ ತಂ. ಲೋಕಪ್ಪ ರಾಠೋಡ, ಚೆನ್ನವೀರನಗೌಡ ತಂ. ತಿಮ್ಮನಗೌಡ ಮತ್ತು ಸತ್ಯಪ್ಪ ತಂ. ದಾಸಪ್ಪ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸಹಾಯಕ ಆಯುಕ್ತರು, ತಹಸೀಲ್ದಾರ ಲಿಂಗಸ್ಗೂರು ಇವರ ಆದೇಶದ ಮೇರೆಗೆ ಕಂದಾಯ ನಿರೀಕ್ಷಕರ ದೂರಿನ ಮೇರೆಗೆ ಮದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆನೋವು; ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಗೊಣಿಗನೂರು ಗ್ರಾಮದಲ್ಲಿ ಹೊಟ್ಟೆನೋವಿನ ಬಾಧೆಯಿಂದ ಬಳಲಿ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಶಾಂತಮ್ಮ(50) ಎಂದು ಗುರುತಿಸಲಾಗಿದೆ.ಈಕೆಯು ಕಳೆದ ಅನೇಕ ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಅದರಿಂದ ಬೇಸತ್ತಿದ್ದ ಆಕೆಯು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು ಸಿಂಧನೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.