ದಮನಕಾರಿ ನೀತಿ ವಿರುದ್ಧ ರಾಜಿರಹಿತ ಹೋರಾಟ
ಕನ್ನಡಪ್ರಭ ವಾರ್ತೆ ರಾಯಚೂರು ಡಿ.3
ಜಿಲ್ಲಾಡಳಿತದ ಲಾಠಿ ಪ್ರಹಾರಕ್ಕೆ ಬೆದರಿಲ್ಲ. ಸರ್ಕಾರದ ರೈತರ ಹೋರಾಟ ದಮನ ನೀತಿ ವಿರುದ್ಧ ರಾಜೀ ರಹಿತ ಹೋರಾಟಕ್ಕೆ ಸಿದ್ಧತೆ. ರೈತ ಸಂಘ ವಸೂಲಿ ಸಂಘಟನೆಯೆಂದು ಹೀಗಳೆದ ಡಿಸಿ ಆರೋಪ ಸಾಬೀತು ಪಡಿಸಬೇಕು. ಜಿಲ್ಲಾಡಳಿತ ಮತ್ತು ಸರ್ಕಾರ ರೈತರ ಮೇಲಿನ ಲಾಠಿ ಪ್ರಹಾರ ಘಟನೆ ಹಿನ್ನೆಲೆ ರೈತರ ಕ್ಷಮೆ ಯಾಚಿಸಬೇಕು. ಬಗರ್ ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿಸುವ ತಂತ್ರಕ್ಕೆ ರೈತರೊಂದಿಗೆ ಸೇರಿ ತಕ್ಕ ಪ್ರತ್ಯುತ್ತ್ತರದ ಎಚ್ಚರಿಕೆ.
ನಗರದಲ್ಲಿ ಮಂಗಳವಾರ ಕರ್ನಾಟಕ ರೈತ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಹೀಗೆ ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ರೈತರ ಮೇಲೆ ಲಾಠಿ ಪ್ರಹಾರಕ್ಕೆ ಪ್ರಮುಖ ಕಾರಣರಾಗಿದ್ದಾರೆ. ಶಾಂತಿಯುತ ಹೋರಾಟ ನಡೆಸಿದ್ದವರನ್ನು ನಿರ್ಲಕ್ಷಿಸುವ ಮೂಲಕ ಲಾಠಿ ಪ್ರಹಾರಕ್ಕೆ ದಾರಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅವರ ಬೆನ್ನಿಗಿದೆ ಎಂದು ಟೀಕಿಸಿದರು.
ಜಮೀನು ವಾಪಸ್ ನೀಡಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಪಿಜಿ ಸೆಂಟರ್ ಸ್ಥಾಪನೆಗೆ ರೈತರಿಂದ ವಶಪಡಿಸಿಕೊಂಡ ಫಲವತ್ತಾದ ಜಮೀನು ಪರಿಹಾರದ ಜತೆಗೆ ಹಿಂದಿರುಗಿಸಬೇಕು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ನಿಲ್ಲಿಸಬೇಕೆಂಬ ರೈತ ಸಂಘದ ಹೋರಾಟವನ್ನು ಹತ್ತಿಕ್ಕಲು ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ನಾಯಕರು ಮುಂದಾಗಿರುವುದು ಎದ್ದು ಕಾಣುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿನ ಬಡ ರೈತರು ಜೀವಿಸುವ ಹಕ್ಕಿನ ಸ್ವಾತಂತ್ರ್ಯಕ್ಕಾಗಿ ಬೇಡಿಕೆಯಿರಿಸಲಾಗಿತ್ತು. ಪರಿಣಾಮ ನೂರಾರು ರೈತರು ಹೋರಾಟಕ್ಕೆ ಧುಮುಕಿದ್ದರು. ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ತಂತ್ರ ಜಿಲ್ಲಾಡಳಿತ ರೂಪಿಸಿ ಲಾಠಿ ಪ್ರಹಾರದ ಘಟನೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮತ್ತು ಸಿಎಂ ಸಿದ್ದರಾಮಯ್ಯ ಅವರು ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಹೋರಾಟ: ಜಿಲ್ಲೆಯಲ್ಲಿ ರೈತ ಸಂಘ ಕಳೆದ ಅನೇಕ ವರ್ಷಗಳಿಂದ ವಿವಿಧ ರೀತಿಯ ಹೋರಾಟಗಳನ್ನು ಮಾಡುತ್ತಾ ಬಡವರ ಪರವಾಗಿ ನಿಂತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಈಚಿನ ದಿನಗಳಲ್ಲಿ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿತ್ತು. ಇದರಿಂದ ಆಡಳಿತಕ್ಕೆ ಇರುಸುಮುರುಸು ಉಂಟಾಗಿತ್ತು. ಅದರಿಂದ ಪಾರಾಗಲು ಜಿಲ್ಲಾಧಿ ಕಾರಿಗಳು ಲಾಠಿ ಪ್ರಹಾರದ ನಂತರ ರೈತ ಸಂಘಟನೆಯನ್ನು ವಸೂಲಿ ಸಂಘಟನೆಯೆಂದು ಕರೆಯುವ ಮೂಲಕ ಜನರ ಆಲೋಚನೆಯ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆಂದು ಆರೋಪಿಸಿದರು.
ನೋಟೀಸ್ ಜಾರಿ: ಜಿಲ್ಲೆಯಲ್ಲಿ ಕಂದಾಯ ಇಲಾಖೆಯು ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ವಿರುದ್ಧ ತೆರವು ಕಾರ್ಯಾಚರಣೆಗೆ ಮುಂದಾಗಿದೆ.
ವಾರದೊಳಗೆ ಜಮೀನು ಖಾಲಿ ಮಾಡುವಂತೆ ನೋಟೀಸ್ ಜಾರಿಗೊಳಿಸಿದೆ. ಇಂಥ ಯಾವುದೇ ಬೆದರಿಕೆಗೆ ಸಂಘಟನೆ ಬಗ್ಗುವುದಿಲ್ಲ. ನೋಟೀಸ್ಗೆ ಕಿಮ್ಮತ್ತು ನೀಡದೇ ಸರ್ಕಾರದ ದಮನ ನೀತಿ ವಿರುದ್ಧ ನಿರಂತರ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ರೈತ ಸಂಘವು ಕಳೆದ ಅನೇಕ ತಿಂಗಳಿನಿಂದ ಜಿಲ್ಲೆಯ ಅಕ್ರಮಗಳ ತಡೆಗೆ ಹಾಗೂ ಬಡ ರೈತರ ನೆರವಿಗೆ ಒತ್ತಾಯಿಸಿ ನಡೆಸುತ್ತಿದ್ದ ಹೋರಾಟ ನಿರ್ದಿಷ್ಟವಾಗಿತ್ತು. ಆದರೆ ಆಡಳಿತ ಹೋರಾಟ ದಮನಗೊಳಿಸಲು ಮುಂದಾಗಿದ್ದು ಸರಿಯಲ್ಲ. ಇನ್ನು ಮುಂದೆ ಜಿಲ್ಲಾಡಳಿತದೊಂದಿಗೆ ಹೋರಾಟ ನಡೆಸದೇ ರಾಜ್ಯಮಟ್ಟದಲ್ಲಿ ಪ್ರತಿಭಟನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು. ಸಂಘಟನೆ ಪ್ರಮುಖರಾದ ಕೆ. ನಾಗಲಿಂಗ ಸ್ವಾಮಿ, ರಾಜಶೇಖರ್, ಚಿನ್ನಪ್ಪ ಕೊಟ್ರಿಕಿ ಮತ್ತಿತರರಿದ್ದರು.