ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಅಗತ್ಯ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಡಿ.3
ದೇಶದ ಸರ್ವಾಂಗೀಣ ಅಭಿವೃದ್ಧಿ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ತರಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಕರೆ ನೀಡಿದರು.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಯಚೂರು, ಯಾದಗೀರ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳ ಪ್ರಮುಖ ಮುಖಂಡರ ಸಭೆಯನ್ನು ಉದ್ಘಾಟಿಸಿ, ರೈತ, ಕೃಷಿ, ಕೂಲಿ ಕಾರ್ಮಿಕರು ಚುನಾವಣೆಯಲ್ಲಿ ಹೆಚ್ಚಿನ ರೀತಿಯಲ್ಲಿ ಮತ ಚಲಾವಣೆ ಮಾಡಲಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿ ತಮ್ಮ ಅಮೂಲ್ಯ ಮತ ಮಾರಿಕೊಳ್ಳದೆ ದೇಶದ ಅಭಿವೃದ್ಧಿ ಪರ ಚಿಂತನೆಯುಳ್ಳ ಅಭ್ಯರ್ಥಿಗೆ ಮತ ಹಾಕಬೇಕು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಕಾರ್ಯತಂತ್ರ: ಜಿಲ್ಲಾ ಬಿಜೆಪಿ ಪ್ರಭಾರಿ ತ್ರಿವಿಕ್ರಮ ಜೋಷಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಜೆಪಿ ಮೂರು ಭಾಗಗಳಾಗಿರುವುದು ಪ್ರಮುಖ ಕಾರಣ. ಬರುವ ಲೋಕಸಭಾ ಚುನಾವಣೆ ನಿಮಿತ್ತ ಕಾರ್ಯತಂತ್ರ ರೂಪಿಸಲು ಸಮಿತಿ ರಚಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಮತದಾರರ ಸೇರ್ಪಗೆ ಪಕ್ಷದಿಂದ ಬಿಎಲ್ಎ-1 ನೇಮಕ ಮಾಡಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಎಲ್ಒ-2 ನೇಮಕ ಮಾಡಿ ವಿದ್ಯಾವಂತ ಮತ್ತು 18 ವರ್ಷ ತುಂಬಿದವರು ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ: ಕೇಂದ್ರದ ಯುಪಿಎ ಸರ್ಕಾರ ಕಳೆದ 10 ವರ್ಷದಲ್ಲಿ ಹಲವು ಭ್ರಷ್ಟಾಚಾರ, ಹಗರಣಗಳ ಆರೋಪ ಎದುರಿಸುತ್ತಿದ್ದು, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಾಕ್ ಆಕ್ರಮಿತ ಪ್ರದೇಶ ಭದ್ರವಾಗಿಸಿದ್ದರು. ಆದರೆ ಇಂದಿನ ಪ್ರಧಾನಿ ತುಟಿ ಬಿಚ್ಚದ ಕಾರಣ ಪಾಕ್ ಮತ್ತು ಚೀನಾ ದೇಶದ ಗಡಿ ಅತಿಕ್ರಮಣಕ್ಕೆ ಮುಂದಾಗಿವೆ. ಆರ್ಥಿಕ ಸಮೀಕರಣ ನದಿ ಜೋಡಣೆ ಮತ್ತು ಪ್ರಪಂಚದ ಅತಿ ಎತ್ತರದ ಸರ್ದಾರ ವಲ್ಲಭಬಾಯಿ ಪಟೇಲರ ಮೂರ್ತಿ ನಿರ್ಮಾಣ ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಮತ ತರಲು ಬಿಜೆಪಿ ಮುಖಂಡರು ಮುಂದಾಗಬೇಕೆಂದು ರಾಯಚೂರು ಕೊಪ್ಪಳ ಬಳ್ಳಾರಿ ಜಿಲ್ಲೆಗಳ ಪ್ರಭಾರಿ ಅಶೋಕ ಗಸ್ತಿ ಹೇಳಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಭಾರಿ ತ್ರಿವಿಕ್ರಮ ಜೋಷಿ, ಯಾದಗಿರಿ ಜಿಲ್ಲಾ ಪ್ರಭಾರಿ ವೀರನಗೌಡ ಮಲ್ಲಾಬಾದಿ, ಮುಖಂಡರಾದ ಆರ್. ತಿಮ್ಮಯ್ಯ, ಸಿದ್ಧುಬಂಡಿ, ಟಿ.ಆರ್. ನಾಯಕ, ಅಮರೇಶ ಹೊಸಮನಿ, ಮಲ್ಲಪ್ಪ ಚಿತಾಪುರ, ಸಿದ್ಧನಗೌಡ ಪಾಟೀಲ್, ಶಿವಪುತ್ರಪ್ಪ ಕುಂಬಾರ, ರಮಾನಂದ ಯಾದವ್, ಬಂಡೇಶ ವಲ್ಕಂದಿನ್ನಿ, ದೇವರಾಜ, ಚಂದ್ರಶೇಖರ, ಜೀವಲೆಪ್ಪ ನಾಯಕ, ಮಲ್ಲಪ್ಪ ಅಂಕುಶದೊಡ್ಡಿ, ದೇವೇಂದ್ರ ನಾಯಕ ಮತ್ತಿತರರು ಇದ್ದರು.
ಬಿಜೆಪಿಗೆ ಬಿಎಸ್ವೈ; ವರಿಷ್ಠರ ಚಿಂತನೆ: ಗಸ್ತಿ
ಲಿಂಗಸ್ಗೂರು: ಮಾಜಿ ಸಿಎಂ ಯಡಿಯೂರಪ್ಪ ರಾಜ್ಯದ ಜನನಾಯಕ ಎಂಬುದು ಸತ್ಯ. ಅವರನ್ನು ಬಿಜೆಪಿಗೆ ಕರೆತರುವ ಬಗ್ಗೆ ಕೇಂದ್ರದ ವರಿಷ್ಠರು ಚಿಂತನೆ ನಡೆಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಡಿ.8ರ ನಂತರ ಪಕ್ಷಕ್ಕೆ ಬರಲಿದ್ದಾರೆಂದು ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಪ್ರಭಾರಿ ಅಶೋಕ ಗಸ್ತಿ ಸುಳಿವು ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ, ಶಾದಿಭಾಗ್ಯ ಇನ್ನಿತರೆ ಭಾಗ್ಯಗಳಲ್ಲಿ ಕಾಲಹರಣ ಮಾಡುತ್ತಿದ್ದು, ಇದರಿಂದ ಯಾವ ಯೋಜನೆ ಕೂಡ ಫಲಪ್ರದವಾಗುವುದಿಲ್ಲ. 2ಕ್ಕೆ ಕೆಜಿ ಅಕ್ಕಿ ಪಡೆಯುತ್ತಿದ್ದ ಜನ ಎಪಿಎಲ್ ಕಾರ್ಡ್ ರದ್ದುಪಡಿಸಿ, 1ಕ್ಕೆ ಕೆಜಿ ಅನ್ನಭಾಗ್ಯ ಜಾರಿಗೆ ತಂದಿದ್ದಾರೆ.
ವಿಜ್ಞಾನಿಗಳೂ ದೇವರಿಗೆ ಮೊರೆ: ಮೂಢನಂಬಿಕೆ ಎಂಬುದು ಅವರವರ ವೈಯಕ್ತಿಕ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ವಿಜ್ಞಾನಿಗಳು ಉಪಗ್ರಹ ಹಾರಿಸುವಾಗಲೂ ದೇವರ ಮೊರೆ ಹೋಗಿದ್ದಾರೆ. ಅಂದರೆ ನಂಬಿಕೆ ಎಂಬುದು ಬಲವಂತವಾಗಿ ಕಸಿಯದೆ ಮೂಢನಂಬಿಕೆ ಎಂಬ ಶೋಷಣೆಗೆ ತಿಲಾಂಜಲಿ ನೀಡಬೇಕಿದೆ ಎಂದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು, ಈ ಹಿಂದೆ ಗರೀಬಿ ಹಟಾವೋ ಜಾರಿಗೆ ತಂದಂತೆ ಇಂದು ರಾಹುಲ್ ಗಾಂಧಿ ಆಹಾರಭದ್ರತೆ ಎಂದು ಹೇಳುತ್ತಿದ್ದಾರೆ. ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಕ್ಷ ಸಂಘಟನೆಗೆ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.
ಪಕ್ಷದ ತಾಲೂಕಾಧ್ಯಕ್ಷ ಸಿದ್ಧನಗೌಡ ಪಾಟೀಲ್, ಮುಖಂಡರಾದ ಲಕ್ಷ್ಮೀಕಾಂತರೆಡ್ಡಿ, ಶಿವಪುತ್ರಪ್ಪ, ಮಲ್ಲಪ್ಪ ಚಿತ್ತಾಪುರ, ದೇವೇಂದ್ರ ನಾಯ್ಕ ಸೇರಿದಂತೆ ಇದ್ದರು.