ಬೆಲೆಯಿಲ್ಲದೆ ಹೊಲದಲ್ಲಿರುವ 'ಬತ್ತದ' ರಾಶಿ
ಸಿಂಧನೂರು: ಆಗಾಗ ಕವಿಯುವ ಮೋಡ, ಬೆಳಿಗ್ಗೆ ಇಬ್ಬನಿ. ಆತಂಕದ ನಡುವೆಯೂ ರೈತರು ಬೆಲೆಯಿಲ್ಲದ ಕಾರಣಕ್ಕೆ ಮಾರುಕಟ್ಟೆಗೆ ಒಯ್ಯದೆ ಬತ್ತದ ಗದ್ದೆಗಳಲ್ಲಿ ರಾಶಿಯನ್ನು ತಾಡಪಾಲುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಕಲ್ಲೂರು, ಮುಳ್ಳೂರು, ಬಸಾಪುರ, ಪರಾಪುರ, ಎಲೆಕೂಡ್ಲಿಗಿ, ಜವಳಗೇರಾ, ಮೂರುಮೈಲು ಕ್ಯಾಂಪ್, ಜಾಲಿಹಾಳ, ಹಂಚಿಕೆನಾಳಕ್ಯಾಂಪ್, ರೌಡಕುಂದಾ, ಪುನರ್ವಸತಿ ಕ್ಯಾಂಪ್ ಕುರುಕುಂದಾ, ಗೀತಾಕ್ಯಾಂಪ್ ಸೇರಿದಂತೆ ಹಲವು ಗ್ರಾಮ ಮತ್ತು ಕ್ಯಾಂಪ್ಗಳಲ್ಲಿ ರೈತರು ನಷ್ಟದ ಭೀತಿಯಿಂದ ಬತ್ತವನ್ನು ಮಾರಾಟ ಮಾಡದೆ ಕಂಗಾಲಾಗಿ, ಹಾಗೆಯೇ ಹೊಲದಲ್ಲಿ ಉಳಿಸಿದ್ದಾರೆ.
ರಾಸಾಯನಿಕ ಬಳಕೆ, ಗೊಬ್ಬರ ಹಾಗೂ ಕೃಷಿ ಕೂಲಿಕಾರ್ಮಿಕರಿಗೆ ಕೂಲಿ ಹಾಗೂ ಬತ್ತ ಕಟಾವು ಸೇರಿದಂತೆ ಹಲವು ಖರ್ಚುಗಳಿಂದ ಈ ಬಾರಿ ಎಕರೆಗೆ ರು. 20 ಸಾವಿರ ಖರ್ಚು ದಾಟಿದೆ. ಸರ್ಕಾರ 1600 ಬೆಲೆ ನೀಡಿದರೂ ನಷ್ಟವಾಗಲಿದೆ. ಕನಿಷ್ಠ ರು. 2000 ಸಾವಿರ ನೀಡಿದರೆ ಅನುಕೂಲ, ಎಂದು ಬಸಾಪುರ ಗ್ರಾಮದ ರೈತ ರುದ್ರಣ್ಣ ಹೇಳಿದರು. ರೈತರು ತಮ್ಮ ರಾಶಿ ಹಾಕಿಕೊಂಡು ರೇಟಿಗಾಗಿ ಕಾಯುತ್ತಿರುವುದು ಸಾಮಾನ್ಯವಾಗಿದೆ.