ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಾಠಿ ಪ್ರಹಾರ ಘಟನೆಗೆ ರೈತ ಸಂಘ ಖಂಡನೆ

Lingaraj Badiger
Updated On : 4 Dec 2013, 10:59 am

ದೇವದುರ್ಗ: ರಾಯಚೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ನಿರತ ಕರ್ನಾಟಕ ರೈತ ಸಂಘದ ನೂರಾರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ಮಂಗಳವಾರ ಪಟ್ಟಣದಲ್ಲಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹತ್ತಿಕ್ಕುವ ತಂತ್ರ: ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪಟ್ಟಣದ ಹಜರತ್ ಜಹೀರುದ್ದೀನ್ ಪಾಶಾ ಚೌಕ್ ನಲ್ಲಿ ಜಿಲ್ಲಾಧಿಕಾರಿಗಳ ಪ್ರತಿಕೃತಿ ದಹಿಸಿ, ರೈತರ ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಏಕಾಏಕಿ ಪೊಲೀಸ್‌ರಿಂದ ಬಲಪ್ರಯೋಗಕ್ಕೆ ಮುಂದಾಗಿದ್ದು, ರೈತ ಹೋರಾಟವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ನೆಲಗಳ್ಳರ, ಅಕ್ರಮ ಗಣಿ ಲೂಟಿಕೋರರ ನಿಯಂತ್ರಣಕ್ಕೆ ಮುಂದಾಗದ ಆಡಳಿತ ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ರೈತರ ವಿರುದ್ಧವೇ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಜನಪರ ಸಂಘಟನೆಗಳನ್ನು ವಸೂಲಿಕೋರ ಸಂಘಟನೆಗಳೆಂದು ಆರೋಪಿಸಿರುವ ಜಿಲ್ಲಾಧಿಕಾರಿ ನಾಗರಾಜು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆಂದು ದೂರಿದರು.  ಸಂಘಟನೆಕಾರರು ವಸೂಲಿ ಮಾಡುತ್ತಿದ್ದಾರೆಂಬ ಬಗ್ಗೆ ಆರೋಪ ಮಾಡಿರುವ ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ತಮ್ಮಲ್ಲಿನ ಸಾಕ್ಷ್ಯಾಧಾರ ಬಹಿರಂಗಗೊಳಿಸಹಬೇಕು. ಅಂಥ ಸಂಘಟನೆಯ ವಿರುದ್ಧ ಕೇಸು ದಾಖಲಿಸಿ ವಿಚಾರಣೆಗೊಳಪಡಿಸಲು ಸವಾಲು ಹಾಕಿದರು.
ಸಂಘಟನೆ ಪ್ರಮುಖರಾದ ದುರ್ಗಣ್ಣ ಇರಬಗೇರಾ, ಸದಾಶಿವ ಗೋಪಾಳಪುರ, ಖಾಜಾ ಹುಸೇನ, ಹನುಮಂತ್ರಾಯ ಗಂಗೆ, ಆಂಜನೇಯ, ಮಾರ್ತಾಂಡ ಸ್ವಾಮಿ, ನಬೀಸಾಬ ಮದರಕಲ್, ಮಹಿಬೂಬ್ ಸಾಬ್, ಗಿರಿಲಿಂಗಸ್ವಾಮಿ ಶಿವುಕುಮಾರ ಕಟ್ಟಿ, ಚನ್ನಬಸವ ಕರಿಗುಡ್ಡ ಸೇರಿ ಅನೇಕರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement