ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಂಚಕ ಢೋಂಗಿ ಬಾಬಾ ಬಂಧನ

Lingaraj Badiger
Updated On : 4 Dec 2013, 11:06 am

ರಾಯಚೂರು: ನೌಕರಿ ಕೊಡಿಸುವುದಾಗಿ ಹೇಳಿ ಅಮಾಯಕರಿಂದ ಲಕ್ಷಾಂತರ ರು. ಪಡೆದು ಪರಾರಿಯಾಗಿ ಆಂಧ್ರದಲ್ಲಿ ನೆಲೆಸಿದ್ದ ವಂಚಕನೊಬ್ಬನನ್ನು ನಗರದ ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಶ್ರೀನಿವಾಸ ರಾಮಯ್ಯ(54) ಎಂದು ಗುರುತಿಸಲಾಗಿದೆ. ಈತನನ್ನು ನಗರದ ಪಶ್ಚಿಮ ಪೊಲೀಸ್ ಠಾಣೆಯ ಸಿಬ್ಬಂದಿ ಆಂಧ್ರದ ಮಹೆಬೂಬ್‌ನಗರ ಜಿಲ್ಲೆಯ ಮರಿಕಲ್‌ನ ದರ್ಗಾವೊಂದರಲ್ಲಿ ಬಂಧಿಸಿದ್ದಾರೆ.
ಈತ ರಾಯಚೂರು ತಾಲೂಕಿನ ವಕ್ರಾಣಿ ಗ್ರಾಮದ ಮಲ್ಲೇಶ ಎಂಬುವವರಿಂದ ಅಬಕಾರಿ ಇಲಾಖೆಯಲ್ಲಿ ಅಬಕಾರಿ ರಕ್ಷಕ ಹುದ್ದೆ ನೌಕರಿ ಕೊಡಿಸುವುದಾಗಿ ಹೇಳಿ 3 ಲಕ್ಷ ಪಡೆದಿದ್ದ. ಆನಂತರದಲ್ಲಿ ಅಬಕಾರಿ ಜಂಟಿ ಆಯುಕ್ತರು, ಜಾರಿ ಮತ್ತು ತನಿಖೆ ಗುಲ್ಬರ್ಗ ವಿಭಾಗ ಎಂಬ ಹೆಸರಿನ ಸುಳ್ಳು ಆದೇಶ ಸೃಷ್ಟಿಸಿ ಮಲ್ಲೇಶಗೆ ನೀಡಿ ಒಟ್ಟು 6 ಲಕ್ಷ ಪಡೆದು, ನೌಕರಿ ಕೊಡಿಸದೇ ಹಣವನ್ನು ವಾಪಸ್ ಮಾಡದೇ ಜೀವ ಬೆದರಿಕೆ ಹಾಕಿ ವಂಚಿಸಿದ್ದ. ಈ ಬಗ್ಗೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದರ್ಗಾ ನಿರ್ಮಿಸಿಕೊಂಡಿದ್ದ: ಆ ನಂತರ ಆರೋಪಿ ಶ್ರೀನಿವಾಸನ ಪತ್ನಿ ಸುಶೀಲಮ್ಮ ಎಂಬಾಕೆಯು ತನ್ನ ಪತಿ ಶ್ರೀನಿವಾಸ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಆತ ಆಂಧ್ರದ ಮಹೆಬೂಬ್‌ನಗರ ಜಿಲ್ಲೆಯ ಮರಿಕಲ್ ಗ್ರಾಮದ ಹೊರವಲಯದಲ್ಲಿ ವೇಷ ಬದಲಿಸಿಕೊಂಡು ಹುಸೇನಿ ಆಲಂಬಾಬಾ ಎಂಬ ದರ್ಗಾ ನಿರ್ಮಿಸಿಕೊಂಡು ಯಲಗಂಡ್ಲಾಸ್ವಾಮಿ ಅಂತ ಹೆಸರು ಬದಲಿಸಿಕೊಂಡು ಮತ್ತಷ್ಟು ಜನರಿಗೆ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ನಗರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಂಧ್ರದಲ್ಲಿಯೂ ಆತ ಅನೇಕರನ್ನು ವಂಚಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದರಂತೆ ಆರೋಪಿ ಶ್ರೀನಿವಾಸ್ 30 ಜನರಿಂದ 20 ಲಕ್ಷ ಪಡೆದು ವಂಚಿಸಿರುವುದು ಬಹಿರಂಗಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement