ಹತ್ತಿ ಖರೀದಿಗೆ ಇ-ಟೆಂಡರ್ ಅಳವಡಿಕೆಗೆ ಪ್ರಸ್ತಾವನೆ
ಕ.ಪ್ರ. ವಾರ್ತೆ ರಾಯಚೂರು ಡಿ.3
ಎಪಿಎಂಸಿಯ ಹತ್ತಿ ಮಾರುಕಟ್ಟೆಯಲ್ಲಿ ರೈತರಿಂದ ಹತ್ತಿ ಖರೀದಿಗೆ ಇ-ಟೆಂಡರ್ ಪದ್ಧತಿ ಅಳವಡಿಕೆ ಸಂಬಂಧಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಅನುಮೋದನೆ ದೊರೆಯುತ್ತಿದ್ದಂತೆಯೇ ಆಡಳಿತವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಭರವಸೆ ನೀಡಿದರು.
ಅವರು ನಗರದಲ್ಲಿ ಮಂಗಳವಾರ ಹತ್ತಿ ಬೆಳೆಗಾರರು, ರಾಜ್ಯ ರೈತ ಸಂಘ, ವರ್ತಕರೊಂದಿಗೆ ಹತ್ತಿ ಬೆಳೆಗಾರರ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯ ಕೃಷಿ ಮಾರಾಟ ಇಲಾಖೆಗೆ ಇ-ಟೆಂಡರ್ ಅಳವಡಿಕೆಗೆ ಸಂಬಂಧಿಸಿ ಜಿಲ್ಲಾಡಳಿತ ಪತ್ರ ಬರೆದಿದೆ. ಆದರೆ ಇದುವರೆಗೆ ಇಲಾಖೆಯ ನಿರ್ದೇಶಕರಿಂದ ಯಾವುದೇ ರೀತಿಯ ಆದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷ್ಕರಣೆ: ಹತ್ತಿ ಮಾರುಕಟ್ಟೆಯ ಬಿ-ವಿಂಗ್ನಲ್ಲಿ ತರಕಾರಿಯ ಸಗಟು ಮಾರಾಟಗಾರರಿಗೆ ಮಾರುಕಟ್ಟೆ ಸ್ಥಾಪನೆಗೆ ವ್ಯವಸ್ಥೆ ಕಲ್ಪಿಸಲು ಕೃಷಿ ಮಾರಾಟ ಇಲಾಖೆಗೆ ಮನವಿ ಮಾಡಲಾಗಿದೆ. ಇಲಾಖೆಯ ನಿರ್ದೇಶಕರು ಕೆಲ ಮಾರ್ಪಾಟು ಸೂಚಿಸಿದ್ದರಿಂದ ಪುನಾ ಆಡಳಿತ ನಕ್ಷೆ ಪರಿಷ್ಕರಿಸಿ ಸಲ್ಲಿಸಿದೆ ಎಂದು ತಿಳಿಸಿದರು.
ಈ ವೇಳೆ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು ಎಪಿಎಂಸಿ ಗಂಜ್ ಪ್ರದೇಶದಲ್ಲಿ ಮಳೆ ಸುರಿದಾಗಲೆಲ್ಲ ಮಳೆಯ ನೀರು ಶೆಡ್ಗಳ ಒಳಗೆ ನುಗ್ಗುವುದರಿಂದ ರೈತರ ಬೆಳೆಗೆ ಹಾನಿಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ವಾರ್ಷಿಕ ಕ್ರಿಯಾ ಯೋಜನೆ ಅಡಿ ಮಳೆಯ ನೀರು ಸರಾಗವಾಗಿ ಹರಿದು ಸಾಗುವಂತೆ ಕಾಮಗಾರಿ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಮಾರುಕಟ್ಟೆಯಲ್ಲಿ ವರ್ತಕರು ರೈತರ ಬೆಳೆಯಿಂದ ಹೆಚ್ಚಿನ ಪ್ರಮಾಣದ ಮಾದರಿ ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳಿದ್ದು, ಹಾಗೆ ಮಾಡದಂತೆ ಸೂಚಿಸಿದರು.
ತೇವಾಂಶ: ಹತ್ತಿ ಖರೀದಿಸಿದ ನಂತರದಲ್ಲಿ ಒಪ್ಪಿಗೆಯಾದ ದರದಲ್ಲಿ ಮತ್ತೆ ಕಡಿತ ಮಾಡುವಂತಿಲ್ಲ. ನಿಗದಿತ ಪ್ರಮಾಣಕ್ಕಿಂತಹೆಚ್ಚಿನ ತೇವಾಂಶವಿರುವ ಹತ್ತಿಯನ್ನು ತೇವಾಂಶ ಪತ್ತೆಗೆ ಯಂತ್ರ ಬಳಸಬೇಕು. ಹತ್ತಿಗೆ ನೀರು ಸಿಂಪಡಿಸಿ ತೂಕ ಹೆಚ್ಚಿಸುವಂಥ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ತಿಳಿ ಹೇಳಿದರು.
ಸಭೆಯಲ್ಲಿ ಸರಕು ಸಾಗಣೆ ವೆಚ್ಚ, ಎಪಿಎಂಸಿ ಸಿಬ್ಬಂದಿಯಿಂದ ತೂಕದ ಯಂತ್ರ ನಿರ್ವಹಣೆ ಕಾರ್ಯ ಕೈಗೊಳ್ಳುವುದು, ವಾರಕ್ಕೊಮ್ಮೆ ನಡೆವ ಜಾನುವಾರು ಸಂತೆಯನ್ನು ಬೇರೆಡೆಗೆ ವರ್ಗಾಯಿಸುವುದು ಸೇರಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಭೆ ಚರ್ಚಿಸಿತು. ಸಭೆಯಲ್ಲಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ವಿಠಲ್ ಪೂಜಾರಿ, ಬೆಲ್ಲಂ ನರಸರೆಡ್ಡಿ, ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪ ಸ್ವಾಮಿ, ಚಿನ್ನಯ್ಯ ನಾಯಕ ಇದ್ದರು.