ಹೋರಾಟ ಹತ್ತಿಕ್ಕಿದ ಜನದ್ರೋಹಿ ಜಿಲ್ಲಾಡಳಿತ
ರಾಯಚೂರು: ಹೋರಾಟನಿರತ ರೈತರ ಮೇಲಿನ ಜಿಲ್ಲಾಡಳಿತದ ದೌರ್ಜನ್ಯವನ್ನು ಟಿಯುಸಿಐ ಸಂಘಟನೆ ಬಲವಾಗಿ ಖಂಡಿಸಿದ್ದು, ರೈತರ ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಏಕಾಏಕಿ ಪೊಲೀಸ್ ಬಲ ಪ್ರದರ್ಶನಕ್ಕೆ ಮುಂದಾಗಿದ್ದು ರೈತರ ಹೋರಾಟ ಹತ್ತಿಕ್ಕುವ ಜನದ್ರೋಹಿತನ ಸ್ಪಷ್ಟಪಡಿಸಿದೆ ಎಂದು ಟೀಕಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಪ್ರಮುಖರಾದ ಡಿ.ಎಚ್. ಪೂಜಾರ್, ಚಿನ್ನಪ್ಪ ಕೊಟ್ರಿಕಿ, ಜಿಲ್ಲೆಯಲ್ಲಿ ನೆಲಗಳ್ಳರ, ಅಕ್ರಮ ಗಣಿ ಲೂಟಿಕೋರರಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಅಕ್ರಮ ಪೋಷಣೆಗೆ ಸರ್ಕಾರ ಬದ್ಧ: ಕರ್ನಾಟಕ ರೈತ ಸಂಘ ಹಾಗೂ ಸಹ ಸಂಘಟನೆಗಳು ಕಳೆದ ಮೂರು ವರ್ಷಗಳಿಂದ ನಿರಂತರ ಸಲ್ಲಿಸುತ್ತಿರುವ ಬೇಡಿಕೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ. ನೆಲಗಳ್ಳರು ಅಕ್ರಮ ಗಣಿ ಲೂಟಿಕೋರರು, ದಲ್ಲಾಳಿ ಜನದ್ರೋಹಿ ರಾಜಕಾರಣಿಗಳು ಮುಖ್ಯಮಂತ್ರಿ ಸೇರಿ ಎಲ್ಲ ಭ್ರಷ್ಟಾಧಿಕಾರಿಗಳು ಜಿಲ್ಲೆಯ ಅಕ್ರಮಗಳನ್ನು ಪೋಷಿಸಲು ಕಂಕಣಬದ್ಧರಾಗಿದ್ದಾರೆಂದು ಆರೋಪಿಸಿದ್ದಾರೆ.
ಜನಪರ ಸಂಘಟನೆಗಳನ್ನು ವಸೂಲಿಕೋರರ ಸಂಘಟನೆಗಳೆಂದು ಆರೋಪಿಸುತ್ತಿರುವ ಜಿಲ್ಲಾಧಿಕಾರಿ ನಾಗರಾಜು, ಸರ್ಕಾರಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಸಂಘಟನೆಕಾರರು ವಸೂಲಿ ಮಾಡುತ್ತಿದ್ದಾರೆಂಬ ಸಾಕ್ಷ್ಯಾಧಾರದೊಂದಿಗೆ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಲು ಆಗ್ರಹಿಸಿದ್ದಾರೆ.
ಜನತೆ ತಮ್ಮ ಹಕ್ಕುಗಳನ್ನು ಪಡೆಯಲು ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ.