ಅಶುದ್ಧ ನೀರು; ರೋಗ ಭೀತಿ
ಕ.ಪ್ರ.ವಾರ್ತೆ , ಮುದಗಲ್ , ಡಿ.4
ಸ್ಥಳೀಯ ಪಟ್ಟಣ ಪಂಚಾಯಿತಿ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಯೋಜನೆಯಿಂದ ನೀರು ಸರಬರಾಜು ಮಾಡುತ್ತಿದ್ದು, ನೀರು ಶುದ್ಧೀಕರಣವಾಗದೆ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ನಾರಾಯಣಪುರ ಜಲಾಶಯದ ಹಿನ್ನೀರನ್ನು ಮುದಗಲ್ ಪಟ್ಟಣಕ್ಕೆ ಕುಡಿಯಲು ಸರಬರಾಜು ಮಾಡುಲಾಗುತ್ತಿದೆ. ಈ ಯೋಜನೆಗಾಗಿ ಸರ್ಕಾರ 8.50 ಕೋಟಿ ಖರ್ಚು ಮಾಡಿದೆ. ಸಮೀಪದ ಕನ್ನಾಪುರಹಟ್ಟಿ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಿದ್ದು ಅಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗದ ಕಾರಣ ಮತ್ತು ಜಲ ಶುದ್ಧೀಕರಣ ಘಟಕದಲ್ಲಿ ಕೆಲಸ ಮಾಡುವವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದರಿಂದ ಪಟ್ಟಣದ ಜನರು ಹೊಂಡ, ಇಲ್ಲವೆ ಕಲುಷಿತ ನೀರು ಕುಡಿವ ದುಸ್ಥಿತಿ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಜಲ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಣ ಮಾಡಲು ಆಲಂ ಪೌಡರ್ ಬಳಸಲಾಗುತ್ತಿದೆ ಆದರೆ ಕಳೆದ ಎರಡು ತಿಂಗಳಿಂದ ಆಲಂ ಪೌಡರ್ ಬಳಕೆ ನಿಲ್ಲಿಸಿದ್ದರಿಂದ ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ನದಿಯಿಂದ ಸರಬರಾಜಾಗುವ ನೀರನ್ನು ಕೆಲಸಗಾರರು ನೇರವಾಗಿ ಪಟ್ಟಣದ ನೀರಿನ ಸಂಗ್ರಹಣ ತೊಟ್ಟಿಗೆ ಬಿಡುತ್ತಾರೆ ಎಂದು ತಿಳಿದು ಬಂದಿದೆ.
ಜಲ ಶುದ್ಧೀಕರಣ ಘಟಕವನ್ನು ಪ್ರತಿ 15 ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಆ ಕೆಲಸ ಇಲ್ಲಿ ಆಗುತ್ತಿಲ್ಲ, ಸಾಲದ್ದಕ್ಕೆ ಪಟ್ಟಣದ ಜನರಿಗೆ ಸಾಂಕ್ರಾಮಿಕ ರೋಗ ಹರಡದಂತೆ ನೀರಿನಲ್ಲಿ ಔಷಧ ಮಿಶ್ರಣ ಮಾಡಬೇಕು. ಅದಾವುದನ್ನೂ ಸಂಬಂಧಿತ ಅಧಿಕಾರಿಗಳು ಮಾಡುತ್ತಿಲ್ಲ.
ಭದ್ರತೆ ಇಲ್ಲ: ನೀರು ಶುದ್ಧೀಕರಣ ಘಟಕಕ್ಕೆ ಸೂಕ್ತ ಭದ್ರತೆಯಿಲ್ಲ, ಇಲ್ಲಿ ಯಾರು ಬೇಕಾದರೂ ಹೋಗಬಹುದಾಗಿದೆ. ಪಪಂ ಆಡಳಿತವು ಬೆಳಗಿನ ಜಾವ ಇಬ್ಬರು, ರಾತ್ರಿ ಇಬ್ಬರನ್ನು ಕೆಲಸಕ್ಕೆ ನೇಮಿಸಿದೆ. ವಿಪರ್ಯಾಸ ಎಂದರೆ- ಆದರೆ ಕೆಲಸ ಮಾಡುವವರು ಇಬ್ಬರು. ಸಂಬಳ ಪಡೆಯುವವರು ನಾಲ್ಕು ಜನ. ಇರುವ ಕೆಲಸಗಾರರು ಸರಿಯಾಗಿ ಕರ್ತವ್ಯವ ನಿರ್ವಹಿಸದೆ ಇದ್ದುದರಿಂದ ಏನಬೇಕಾದರು ನಡೆಯಬಹುದಾಗಿದೆ.
ಪಟ್ಟಣದಲ್ಲಿ ಕೆಲವು ವಾರ್ಡುಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಕೇಳಿದರೆ ವಿದ್ಯುತ್ ಇಲ್ಲ ಎನ್ನುವ ಇಲ್ಲದ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕಚೇರಿ ಕೆಲಸಗಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರು ಶುದ್ಧೀಕರಣ ಘಟಕದಲ್ಲಿ ರಾತ್ರಿ ವೇಳೆ ಯಾರೂ ಇರುವುದಿಲ್ಲ ಎನ್ನುವುದನ್ನು ಮನಗಂಡ ಪಪಂ ಅಧ್ಯಕ್ಷ ರಜ್ಜಬಲಿ, ತನ್ನ ಆಡಳಿತ ಮಂಡಳಿ ಸದಸ್ಯರೊಟ್ಟಿಗೆ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ್ದರೂ ಸಿಬ್ಬಂದಿಗಳ ಕ್ಯಾತೆ ಇನ್ನೂ ಕಡಿಮೆಯಾಗಿಲ್ಲ.
ಹೇಳೋರಿಲ್ಲ, ಕೇಳೋರಿಲ್ಲ..: ಕುಡಿವ ನೀರಿನ ಸಮಸ್ಯೆ ಬಗ್ಗೆ ಹೇಳುವವರು, ಕೇಳುವವರಾರೂ ಇಲ್ಲದಾಗಿದೆ. ನದಿಯಲ್ಲಿ ನೀರು ಇರುವಾಗಲೇ ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇನ್ನು ಬೇಸಿಗೆ ದಿನಗಳಲ್ಲಿ ಶುದ್ಧ ಕುಡಿವ ನೀರು ಸರಬರಾಜು ಮಾಡಲು ಆಡಳಿತ ಮಂಡಳಿ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಸರು ಮಿಶ್ರಿತ ನೀರು ಸರಬರಾಜು ಆಗದಂತೆ ನಿಗಾವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
-ಪಂಪಯ್ಯ ಮಠ