ಜನಪದ ಸಾಹಿತ್ಯ ಉಳಿಸಿ: ರಮೇಶ
ಸಿಂಧನೂರು: ಗಣಕಯಂತ್ರ ಹಾಗೂ ಅಂತರ್ಜಾಲ ಯುಗದಲ್ಲಿ ನಶಿಸಿ ಹೋಗುತ್ತಿರುವ ಜನಪದ ಸಾಹಿತ್ಯದ ರಕ್ಷಣೆಗೆ ವಿದ್ಯಾರ್ಥಿಗಳು ಮುಂದೆ ಬರಬೇಕೆಂದು ಬಡಿಬೇಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ರಮೇಶ ಅಗ್ನಿ ಹೇಳಿದರು.
ನಗರದ ಬಡಿಬೇಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಯಚೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಸ್ಸಿ- ಎಸ್‌ಟಿ ವಿಶೇಷ ಘಟಕ ಯೋಜನೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾರಾಯಣಪ್ಪ ಮಾಡಶಿರವಾರ ಅವರ ಜನಪದ, ತತ್ವಪದಗಳ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಪ್ರಿಯ: ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ತತ್ವಪದಗಳು ವಿಶಿಷ್ಟ ಸ್ಥಾನ ಪಡೆದಿವೆ. ನಾರಾಯಣಪ್ಪ ಮಾಡಶಿರವಾರ ತತ್ವಪದ ಗಾಯನದಲ್ಲಿ ಜನಪ್ರಿಯರಾಗಿದ್ದಾರೆ. ಆ ಮೂಲಕ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ಜನಪದ, ತತ್ವಪದಕಾರ ನಾರಾಯಣಪ್ಪ ಮಾಡಶಿರವಾರ ಜನಪದ ಹಾಗೂ ತತ್ವಪದಗಳನ್ನು ಹಾಡಿ ವಿದ್ಯಾರ್ಥಿಗಳ, ಪ್ರೇಕ್ಷಕರ ಗಮನ ಸೆಳೆದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ, ಪ್ರಶಿಕ್ಷಕ ಗಂಗಾಧರಯ್ಯ ಹಿರೇಮಠ, ಬಡಿಬೇಸ್ ಶಾಲೆಯ ಹಿರಿಯ ಶಿಕ್ಷಕಿ ಸರಸ್ವತಿ, ಶ್ಯಾಮಸುಂದರ ಕಲಮಂಗಿ, ಕಲಾವಿದರಾದ ಬಸವರಾಜ ಪುಲದಿನ್ನಿ, ಭಕ್ಷಿ ದರವೇಶ್, ಕೊಳಲು ವಾದಕ ಮಹ್ಮದ್ ಹಾಸೀಮ್ ಅಲಿ, ರಾಮಸ್ವಾಮಿ ಮಾಡಶಿರವಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೌಲಪ್ಪ ಮಾಡಶಿರವಾರ ನಿರೂಪಿಸಿದರು.