ಬಸ್ ಸೌಕರ್ಯ ಕಲ್ಪಿಸಲು ಮನವಿ
ಲಿಂಗಸ್ಗೂರು: ತಾಲೂಕಿನ ಕೋಠಾ ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ತೆರಳಲು ಸಾರಿಗೆ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕರವೇ ನೇತೃತ್ವದಲ್ಲಿ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕ ಬಸವರಾಜ ನಾಯಕ್ಗೆ ಬುಧವಾರ ಮನವಿ ಸಲ್ಲಿಸಿದರು.
ಕೋಠಾದಿಂದ ಹಟ್ಟಿ ಗ್ರಾಮಕ್ಕೆ ಪ್ರತಿನಿತ್ಯ 280 ವಿದ್ಯಾರ್ಥಿಗಳು ತೆರಳುತ್ತಿದ್ದು, ಆದರೆ ಬೆಳಗ್ಗೆ ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಗುರುಗುಂಟಾದಿಂದ ಬೆ. 8.30ಕ್ಕೆ ಬರುವ ಸಾರಿಗೆ ಬಸ್ ಇತ್ತೀಚಿಗೆ ತಡವಾಗಿ ಆಗಮಿಸುತ್ತಿದೆ. ಗ್ರಾಮಕ್ಕೆ ಬೆಳಗ್ಗೆ ಮತ್ತು ಸಾಯಂಕಾಲ ಸರಿಯಾದ ಸಮಯಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಹಟ್ಟಿ, ಗುರುಗುಂಟಾ ಹಾಗೂ ಲಿಂಗಸ್ಗೂರು ಶಾಲಾ-ಕಾಲೇಜುಗಳಿಗೆ ಹೋಗಿ ಬರಬಹುದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಾರಿಗೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಶಿವರಾಜ ನಾಯಕ, ಆಂಜನೇಯ ಭಂಡಾರಿ, ಅಜೀಜ್ ಪಾಶಾ, ಚಂದಪ್ಪ ಕಟ್ಟಿಮನಿ, ಚಂದ್ರು ನಾಯಕ ಇತರರು ಇದ್ದರು.
ಹಂಪಿ: 17ರಂದು ತೆಪ್ಪೋತ್ಸವ
ರಾಯಚೂರು: ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವವು ಡಿ.17 ರಂದು ನಡೆಯಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್ ತಿಳಿಸಿದ್ದಾರೆ. ರಾತ್ರಿ 8.30ಕ್ಕೆ ತೆಪ್ಪೋತ್ಸವ ನಡೆಯಲಿದ್ದು, ಡಿ.19ರಂದು ಚಕ್ರತೀರ್ಥ ಕೋದಂಡರಾಮಸ್ವಾಮಿ ಸನ್ನಿದಿಯಲ್ಲಿ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಜರುಗಲಿದೆ.
8ರಂದು ವೀರಶೈವ ಸಮಿತಿ ಸಭೆ
ರಾಯಚೂರು: ಮಾನವಿ ತಾಲೂಕು ವೀರಶೈವ ಸಮಿತಿ ವತಿಯಿಂದ ಡಿ.8ರಂದು ಸಾಮಾನ್ಯ ಸಭೆ ಕರೆಯಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಒಳಬಳ್ಳಾರಿ ಚೆನ್ನಬಸವ ತಾತನವರ ಪ್ರಸಾದ ನಿಲಯದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಒಳಬಳ್ಳಾರಿ ಚೆನ್ನಬಸವ ಪ್ರಸಾದ ನಿಲಯ ಮತ್ತು ವೀರಶೈವ ಸಮಾಜದ ಸಂಘಟನೆ ಮತ್ತು ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ತಾಲೂಕಿನ ವೀರಶೈವ ಸಮಾಜದವರು ಈ ಸಭೆಯಲ್ಲಿ ಪಾಲ್ಗೊಂಡು ಸಮಾಜದ ಸಂಘಟನೆಗೆ ಸಹಕರಿಸಲು ಮಾನವಿ ತಾಲೂಕು ವೀರಶೈವ ಸಮಿತಿ ಮನವಿ ಮಾಡಿದೆ.
9ರಂದು 'ಯುವ ಸೌರಭ' ಕಾರ್ಯಕ್ರಮ
ರಾಯಚೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಂಧನೂರಿನ ಕನಕದಾಸ ಪ್ರೌಢಶಾಲೆಯಲ್ಲಿ ಡಿ.9ರಂದು ಯುವಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ನಾಗಲಿಂಗನಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ದೊಡ್ಡಬಸವರಾಜ, ಶಿಕ್ಷಕಿ ಶಾರದಾ ಪಾಲ್ಗೊಳ್ಳುವರು. ತನ್ವೀರ್ ಹುಸೇನ್ ಮತ್ತು ಸಂಗಡಿಗರಿಂದ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಜರುಗಲಿದೆ ಎಂದು ಸಹಾಯಕ ನಿರ್ದೇಶಕ ನಿಜಲಿಂಗಪ್ಪ ತಿಳಿಸಿದ್ದಾರೆ.
ಕೋಳಿ ಸಾಕಣೆ
ತರಬೇತಿ ಶಿಬಿರ
ರಾಯಚೂರು: ರಾಜ್ಯಮಟ್ಟದ ಕೋಳಿ ಸಾಕಣೆ ತರಬೇತಿ ಶಿಬಿರ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟೆ ಇವರ ಆಶ್ರಯದಲ್ಲಿ ಈಚೆಗೆ ಆಯೋಜಿಸಲಾಗಿತ್ತು. ಪಶು ವೈದ್ಯಾಧಿಕಾರಿ ಡಾ. ಸಿ.ಎನ್. ನಿಂಬಾಳ್ ದೇಶದಲ್ಲಿ ಕೋಳಿ ಉದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕೆಂದರು. ಕೃಷಿಕರ ಸಂಪನ್ಮೂಲ ಕೇಂದ್ರದ ಬಿ.ಆರ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಬಿ.ಆರ್. ಅಥಣಿ, ಡಾ. ಜಾವೇದ್ ಮುಲ್ಲಾ, ಡಾ ಪಿ.ಆರ್. ಜಾಗೀರದಾರ್, ಡಾ. ಎಸ್.ಬಿ. ಗುಡದಿನ್ನಿ ಹಾಗೂ ಯುನೈಟೆಡ್ ಇನ್ಸೂರೆನ್ಸ್ ಕಂಪನಿಯ ಟಿ.ಆರ್. ಪೋಳ ಆಗಮಿಸಿ ಪಾಲ್ಗೊಂಡಿದ್ದರು.
8ರಂದು ಸೂಗೂರೇಶ್ವರ ಜಾತ್ರೆ
ರಾಯಚೂರು: ತಾಲೂಕಿನ ದೇವಸೂಗೂರು ಸುಕ್ಷೇತ್ರದ ಅಧಿದೇವರಾದ ಸೂಗೂರೇಶ್ವರರ ಜೋಡು ರಥೋತ್ಸವು ಡಿ.8 ರಂದು ನಡೆಯಲಿದೆ. ಅಂದು ಸಂಜೆ 5ಕ್ಕೆ ಜೋಡು ರಥೋತ್ಸವ ನಡೆಯಲಿದ್ದು, ಇದರಂಗವಾಗಿ ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ಜರುಗಲಿವೆ. ವಿಜೇತರರಿಗೆ ಒಂದು ಬೆಳ್ಳಿ ಕಡಗ ಬಹುಮಾನ ನೀಡಲಾಗುವುದು. ಅದೇ ರೀತಿ ಡಿ.14 ರಂದು ಮಾತಾ ನಾಗರ ಯಲ್ಲಮ್ಮ ದೇವಿಯ ರಥೋತ್ಸವವು ಸಂಜೆ 5.30ಕ್ಕೆ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಡಿ.12ರವರೆಗೆ ರಾಯಚೂರು, ಯಾದಗಿರಿ, ಶಹಾಪುರ, ದೇವದುರ್ಗ ಹಾಗೂ ಮಾನವಿಯಿಂದ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಸೂಗೂರೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಡಿ.2ರಿಂದ 8ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾಧಿಕಾರಿಗಳಾದ ಎಸ್.ಎನ್. ನಾಗರಾಜು, ಸಹಾಯಕ ಆಯುಕ್ತೆ ಎನ್. ಮಂಜುಶ್ರೀ, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸುರೇಶಗೌಡ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಎ. ರಾಜು ತಿಳಿಸಿದ್ದಾರೆ.
ಕೃಷಿ ಅಭಿವೃದ್ಧಿ ಮಾಹಿತಿ ಶಿಬಿರ
ರಾಯಚೂರು: ಕಳ್ಳಬಟ್ಟಿ, ಸೇಂದಿ ಮಾರಾಟಗಾರರು ಮತ್ತು ಮದ್ಯ ವ್ಯಸನಿಗಳಿಗಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಯಚೂರು ವಿಶೇಷ ಪೋಲಿಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗ, ಕೃಷಿ ಇಲಾಖೆ, ಕೃಷಿ ವಿಶವ್ವಿದ್ಯಾಲಯ, ಕೃಷಿ ತಂತ್ರಜ್ಞರ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಈಚೆಗೆ ಸಮಗ್ರ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ವಿ. ನಾರಾಯಣ, ಕೃಷಿ ವಿವಿಯ ಜನಗೌಡರ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಡಾ. ಬಿ.ಕೆ. ದೇಸಾಯಿ, ವಿಷಯ ತಜ್ಞರಾದ ಡಾ. ಪ್ರಹ್ಲಾದ್ ಉಬಾಳೆ, ಯೋಜನಾ ನಿರ್ದೇಶಕ ಅಶೋಕ ಪಾಟೀಲ್ ಹಾಗೂ ಎಸ್. ಸಿದ್ದಾರೆಡ್ಡಿ ಭಾಗವಹಿಸಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಜನತೆ ಪಾಲ್ಗೊಂಡಿದ್ದರು.
ಕಾಮ್ ಮಾಂಗೋ ಅಭಿಯಾನ ಇಂದು
ರಾಯಚೂರು: ತಾಲೂಕಿನ ಮಟಮಾರಿ ಗ್ರಾಮದಲ್ಲಿ ಡಿ.5ರಂದು ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮ್ ಮಾಂಗೋ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಗ್ರಾಮದಲ್ಲಿ 10.30ಕ್ಕೆ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಉದ್ಘಾಟಿಸಲಿದ್ದಾರೆ.
ಮಾನಸಿಕ ಅಸ್ವಸ್ಥ ಆತ್ಮಹತ್ಯೆ
ರಾಯಚೂರು: ನಗರದ ರಾಯಚೂರು ಕೃಷಿ ವಿವಿ ಆವರಣದಲ್ಲಿ ಮಾನಸಿಕ ಅಸ್ವಸ್ಥ ಬಸಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಬದುಕುಳಿಯಲಿಲ್ಲ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡ್ಯಾಂನಲ್ಲಿ ಮುಳುಗಿ ವ್ಯಕ್ತಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಮರಳಿ ಗ್ರಾಮದ ಪಿಕ್ ಅಪ್ ಡ್ಯಾಂನಲ್ಲಿ ಮುಳುಗಿ ನಾಗರಾಜ ಎಂಬವರು ಮೃತಪಟ್ಟಿದ್ದಾರೆ. ಸ್ನಾನ ಮಾಡಲು ತೆರಳಿದಾಗ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುದಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ಉಳಿಮೇಶ್ವರ ಗ್ರಾಮದಲ್ಲಿ ಮಂಡಿನೋವಿನಿಂದ ಬಳಲುತ್ತಿದ್ದ ಗಂಗಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಮುದಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.