ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭೂ ಸಾಗುವಳಿದಾರರಿಗೆ ಪಟ್ಟಾ ನೀಡಲು ಆಗ್ರಹ

Vishwanath S
Updated On : 5 Dec 2013, 11:23 am

ಸಿಂಧನೂರು: ತಾಲೂಕಿನ ಬಸಾಪುರ ಇ.ಜೆ. ಗ್ರಾಮದಲ್ಲಿ ಜವಳಗೇರಿ ನಾಡಗೌಡರ ಹೆಚ್ಚುವರಿ ಭೂಮಿ ಪೈಕಿ 31ಎಕರೆ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ಭೂಹೀನ ಬಡವರ ಹೆಸರಲ್ಲಿ ವರ್ಗಾಯಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಸರ್ಕಾರಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಲು ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೆ.25ರಂದು ತಹಸೀಲ್ದಾರರು ವಾರದೊಳಗೆ ಈ 31 ಎಕರೆ ಜಮೀನಿನ ಖರೀದಿಯಲ್ಲಿ ಮೋಸವಾಗಿರುವುದನ್ನು ಒಪ್ಪಿಕೊಂಡಿದ್ದು ಅದರ ಖರೀದಿ ಪತ್ರ ರದ್ದಾಗಬೇಕಾದರೆ ಫಾರ್ಮ್ ನಂ.10ನ್ನು ರದ್ದುಪಡಿಸಬೇಕಾಗಿದೆ. ಅದಕ್ಕೋಸ್ಕರ ಕಾನೂನು ತಜ್ಞರ ಸಲಹೆ ಪಡೆಯಲಾಗುವುದೆಂದು ಲಿಂಗಸ್ಗೂರು ಸಹಾಯಕ ಆಯುಕ್ತರು ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೂಜಾರ ಹೇಳಿದರು.
ಇದೇ ವಿಷಯಕ್ಕೆ ಸಂಬಂಧಿಸಿ ನ.6ರಂದು ಶಾಸಕ ಪ್ರತಾಪಗೌಡ ಪಾಟೀಲ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ವೇಳೆ ತಹಸೀಲ್ದಾರ್ ಮತ್ತು ಸಿಪಿಐ ಆಗಮಿಸಿ ಶಾಸಕರಿಗೆ ಅನಾರೋಗ್ಯ ಇರುವುದರಿಂದ ದಿನಾಂಕ ನಿಗದಿಪಡಿಸಿ ಚರ್ಚಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಧರಣಿ ಹಿಂಪಡೆಯಲಾಗಿತ್ತು. ಆದರೆ ಶಾಸಕರು ಈವರೆಗೆ ಚರ್ಚಿಸುವ ಸೌಜನ್ಯ ತೋರಿಲ್ಲವೆಂದು ಪೂಜಾರ ಆಪಾದಿಸಿದ್ದಾರೆ.
ಬಾದರ್ಲಿ ಮೌನವೇಕೆ?: 1992ರಲ್ಲಿ ಶಾಸಕ ಬಾದರ್ಲಿ ಹಂಪನಗೌಡರ ಸಹೋದರ ಬಸನಗೌಡರ ಮತ್ತು ಮರಿಬಸನಗೌಡ ವಕೀಲರ ಮಧ್ಯಸ್ಥಿಕೆಯಲ್ಲಿ ಅವರ ನಿವಾಸದಲ್ಲಿ ಬಸಾಪುರ ವಿಠ್ಠಲರಾವ್ 31 ಎಕರೆ ಭೂಮಿಯನ್ನು ಭೂರಹಿತರಿಗೆ ಬಿಟ್ಟುಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದಾಖಲಾತಿಗಳು ಹೇಳುತ್ತವೆ. ಶಾಸಕರು ಇದನ್ನು ಅನುಷ್ಠಾನಗೊಳಿಸಲು ಏಕೆ ಮುತುವರ್ಜಿ ವಹಿಸದೆ ಮೌನವಾಗಿದ್ದಾರೆಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement