ಹೊರಗುತ್ತಿಗೆ, ಗುತ್ತಿಗೆ ಕಾರ್ಮಿಕ ಪದ್ಧತಿ ಬೇಡ
ರಾಯಚೂರು: ಕೃಷಿ ವಿವಿ ಹಂಗಾಮಿ ನೌಕರರಿಗೆ ವಿವಿ ಆಡಳಿತ ನೀಡಿದ ಭರವಸೆ ಈಡೇರಿಸದೇ ನಿರ್ಲಕ್ಷಿಸಿದೆ ಎಂದು ಆರೋಪಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ರಾಯಚೂರು ಕೃಷಿ ವಿವಿ ಆವರಣದ ಎದುರು ಬುಧವಾರ ವಿವಿಯ ಹಂಗಾಮಿ ನೌಕರರ ಸಂಘದಿಂದ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ, ಕೃಷಿ ವಿವಿ ಆಡಳಿತವು ಈ ಹಿಂದೆ ಸಂಘದಿಂದ ನಡೆಸಿದ ಹೋರಾಟದ ವೇಳೆ ಅನೇಕ ಬೇಡಿಕೆಗಳ ಈಡೇರಿಕೆ ಕುರಿತು ಸಮ್ಮತಿ ಸೂಚಿಸಿದ್ದರು. ಅವುಗಳ ಈಡೇರಿಕೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.
ಕೂಲಿ ಮೊತ್ತ ಹೆಚ್ಚಿಸಿ: ವಿವಿಯ ವಿವಿ ಕೇಂದ್ರಗಳಲ್ಲಿ ಕಳೆದ 15-20 ವರ್ಷಗಳಿಂದ ಅನೇಕರು ಹಂಗಾಮಿ ನೌಕರರಾಗಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು, ಅವರನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಸದ್ಯ ಕನಿಷ್ಟ ಕೂಲಿಯನ್ನು ಪಾವತಿಸಲಾಗುತ್ತಿದ್ದು, ನ್ಯಾಯಾಲಯದ ಆದೇಶದಂತೆ ಕನಿಷ್ಟ ಕೂಲಿಯ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಹಂಗಾಮಿ ಕಾರ್ಮಿಕರ ಹಾಜರಾತಿ ಪುಸ್ತಕ ನಿರ್ವಹಿಸಬೇಕು. ತಿಂಗಳ ವೇತನವನ್ನು ಕಾರ್ಮಿಕರ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಸಂಬಳ ಜಮಾ ಮಾಡಿದ ವೇಳೆ ವೇತನ ಚೀಟಿ ನೀಡಬೇಕೆಂದು ಒತ್ತಾಯಿಸಿದರು.
ವೇತನ ನೀಡಲು ಕ್ರಮ ಕೈಗೊಳ್ಳಿ: ವಿವಿಯ ವಸತಿ ನಿಲಯಗಳಲ್ಲಿ ಅನೇಕ ಕಾರ್ಮಿಕರಿಗೆ ವೇತನ ನೀಡದೇ ದುಡಿಸಿಕೊಳ್ಳಲಾಗುತ್ತಿದೆ. ಅಂಥವರಿಗೂ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ದುಡಿಮೆಗಾರರ ಯಾದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಹೊರಗುತ್ತಿಗೆ ಮತ್ತು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕ್ಷೇತ್ರ ಕಾರ್ಯದ ಕೆಲಸಗಾರರಿಗೆ ಸುರಕ್ಷಿತ ಸಲಕರಣೆ ಒದಗಿಸಬೇಕು. ಸಮಾನ ದುಡಿಮೆಗೆ ಸಮಾನ ವೇತನ ಪದ್ಧತಿ ಜಾರಿಗೆ ತರುವಂತೆ ಒತ್ತಾಯಿಸಿದ ಹೋರಾಟಗಾರರು, ಈ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ವಿವಿ ಆಡಳಿತ ಹೋರಾಟಗಾರರೊಂದಿಗೆ ಸಭೆ ನಡೆಸಿ ಬೇಡಿಕೆ ಈಡೇರಿಕೆಯ ಭರವಸೆ ನೀಡಿತ್ತು. ಒಪ್ಪಂದಕ್ಕೆ ಸಹಿ ಹಾಕಿ ನಂತರದಲ್ಲಿ ಅವುಗಳ ಈಡೇರಿಸುವ ವಿಚಾರದಲ್ಲಿ ನಿರಾಸಕ್ತಿ ತೋರಿದೆ ಎಂದು ಆರೋಪಿಸಿದರು.
ಈಡೇರುವವರೆಗೆ ಹೋರಾಟ: ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿ ಆಡಳಿತದ ಕಾರ್ಮಿಕ ವಿರೋಧಿ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಘದ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಕೃಷಿ ವಿವಿ ಅಧಿಕಾರಿಗಳು ಸಂಧಾನ ಸಭೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.
ವಿವಿ ಆಡಳಿತ ಈಗಾಗಲೇ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದು, ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮಾರ್ಗದ ರ್ಶನ ಕೋರಿ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಬಸವರಾಜ ಯಾದವ್, ಭೀಮಪ್ ದಾಸ್,ಈಶಪ್ಪ ಸೇರಿ ನೂರಾರು ಜನ ಕೂಲಿಕಾರ್ಮಿಕರಿದ್ದರು.