371(ಜೆ) ಮೀಸಲು ನಿಯಮ ಉಲ್ಲಂಘಿಸಿ ನೇಮಕ: ಪ್ರತಿಭಟನೆ
ರಾಯಚೂರು: ಹೈ.ಕ. ಭಾಗಕ್ಕೆ ಸಂವಿಧಾನದ 371ನೇ ಕಲಂ (ಜೆ) ಅನ್ವಯ ಮೀಸಲಾತಿ ನೀಡುವ ನಿಯಮ ಉಲ್ಲಂಘಿಸಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಗುರುವಾರ ಜನಸಂಗ್ರಾಮ ಪರಿಷತ್ ಮತ್ತಿತರೆ ಸಂಘಟನೆ ಪ್ರಮುಖರು ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹೋರಾಟಗಾರರು, ರಾಜ್ಯದ ಹಿಂದುಳಿದ ಹೈ.ಕ. ಭಾಗಕ್ಕೆ ವಿಶೇಷ ಮೀಸಲಾತಿ ಅವಕಾಶ ಕಲ್ಪಿಸಿದೆ. ಸಂವಿಧಾನದಲ್ಲಿ ಈ ನಿಟ್ಟಿನಲ್ಲಿ ಸೂಕ್ತ ತಿದ್ದುಪಡಿಯನ್ನು ಕೈಗೊಂಡು ಮೀಸಲಾತಿ ಜಾರಿಗೆ ಪೂರಕ ಕ್ರಮ ಜರುಗಿಸಿದ್ದರೂ ವಿವಿಧ ಇಲಾಖೆಗಳಲ್ಲಿ ಕೈಗೊಳ್ಳಲಾಗುತ್ತಿರುವ ನೇಮಕಾತಿಯಲ್ಲಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಟೀಕಿಸಿದರು.
ತರಾತುರಿಯಲ್ಲಿ ನೇಮಕಾತಿ: ಆರೋಗ್ಯ ಇಲಾಖೆಯ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯಿಂದ ಅ.7ರಂದು ಗುತ್ತಿಗೆ ಆಧಾರದಲ್ಲಿ 184 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಡಿ.3 ಮತ್ತು 4 ರಂದು ತರಾತುರಿಯಲ್ಲಿ ನೇಮಕಾತಿ ಆದೇಶ ನೀಡಲಾಗಿದೆ.
ಅದೇ ರೀತಿ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನ.15ರಂದು ಸೊಸೈಟಿ ಫಾರ್ ಕರ್ನಾಟಕ ಜರ್ಮನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಹೈ.ಕ. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಕಲ್ಪಿಸಿಲ್ಲ ಎಂದು ಟೀಕಿಸಿದರು.
ಹೈ.ಕ.ವನ್ನು ದೂರವಿಡುವ ಕಾರ್ಯ: ನ.12ರಂದು ಎಂಎಸ್ಐಎಲ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಹೈ.ಕ. ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿಗದಿಪಡಿಸಿಲ್ಲ. ಈ ಮೂಲಕ ರಾಜ್ಯದಲ್ಲಿ ಜಾರಿಯಲ್ಲಿರುವ ವಿಶೇಷ ಸ್ಥಾನಮಾನದ ಸೌಲಭ್ಯದಿಂದ ಹೈ.ಕ.ಭಾಗದವರನ್ನು ದೂರವಿಡುವ ಕಾರ್ಯ ಸರ್ಕಾರದ ವಿವಿಧ ಇಲಾಖೆಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೈ.ಕ. ಭಾಗ ತೀರಾ ಹಿಂದುಳಿದಿದ್ದು, ಸದ್ಯ ವಿಶೇಷ ಸ್ಥಾನಮಾನ ಕಲ್ಪಿಸಿದ ನಂತರವೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ನೇಮಕಾತಿಗಳಲ್ಲಿ ಮೀಸಲಾತಿ ನಿಗದಿ ಮಾಡದೇ ತರಾತುರಿಯಲ್ಲಿ ನೇಮಕಾತಿ ಆದೇಶ ಹೊರಡಿಸುವುದು, ನೇಮಕಾತಿಗೆ ಅಧಿಸೂಚನೆ ಹೊರಡಿಸುವಂಥ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಟೀಕಿಸಿದರು.
ಸಿಎಂ ಮನವಿ: ಕಾರಣ ಕೂಡಲೇ ಈಗಾಗಲೇ ಹೊರಡಿಸಿದ ಎಲ್ಲ ನೇಮಕಾತಿ ಅಧಿಸೂಚನೆ ಹಿಂಪಡೆದು ಸಂವಿಧಾನ ಬದ್ಧವಾಗಿ ನೀಡಿದ ಮೀಸಲಾತಿಯಂತೆ ಹೈ.ಕ. ಭಾಗದವರಿಗೆ ವಿಶೇಷ ಮೀಸಲಾತಿ ಕಲ್ಪಿಸಿ ಪುನಾ ಅಧಿಸೂಚನೆ ಹೊರಡಿಸಲು ಈ ನಿಟ್ಟಿನಲ್ಲಿ ಸೂಕ್ತ ಆದೇಶ ನೀಡಲು ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ತಿನ ಪ್ರಮುಖರಾದ ಡಾ. ರಜಾಕ್ ಉಸ್ತಾದ್, ಸಿರಾಜ್ ಅಹ್ಮದ್ ಜಾಫರಿ, ವಿವಿಧ ಸಂಘಟನೆಗಳ ಪ್ರಮುಖರಾದ ಬಿ. ನಾಗೇಶ್, ಗಂಗಾಧರಸ್ವಾಮಿ, ವೀರೇಶ ಹೀರಾ, ಕೆ.ಎಸ್. ಸೈಯಿದುದ್ದೀನ್, ಶಿವಕುಮಾರ್ ಯಾದವ್, ಸೈಯದ್ ಶಂಶುದ್ದೀನ್ ಸೇರಿ ಅನೇಕರಿದ್ದರು.