'ಖಾತ್ರಿ'ಯಿಂದ ಗ್ರಾಮ ಸ್ವರಾಜ್ ನನಸು
ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸಿನ ಕೂಸಾಗಿದೆ. ಇಂಥ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಕರೆ ನೀಡಿದರು.
ತಾಲೂಕಿನ ಮಟಮಾರಿ ಗ್ರಾಮದಲ್ಲಿ ಗುರುವಾರ ಜಿಪಂ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಾಮ್ ಮಾಂಗೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಆತ್ಮ ಹಳ್ಳಿಗಳಲ್ಲಿ ಅಡಗಿದೆ ಎಂಬ ಗಾಂಧೀಜಿ ಮಾತಿನಂತೆ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಅವಿರತ ದುಡಿಯುವುದು ಅವಶ್ಯ ಎಂದರು.
ಕಾರ್ಮಿಕರ ಪಾಲ್ಗೊಳ್ಳುವಿಕೆ ಅಗತ್ಯ: ವಿಶ್ವದಲ್ಲಿಯೇ ಶ್ರೇಷ್ಠ ಯೋಜನೆಗಳಲ್ಲಿ ಉದ್ಯೋಗ ಖಾತ್ರಿಯೂ ಒಂದು. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂಥ ಯೋಜನೆಯ ಸಮರ್ಪಕ ಅನುಷ್ಠಾನ ಅವಶ್ಯ. ಉದ್ಯೋಗ ಖಾತ್ರಿ ಯೋಜನೆ ಅಡಿ ಸಾಕಷ್ಟು ಅನುದಾನ ಲಭ್ಯವಿದ್ದು, ಕೂಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಅವಶ್ಯಕತೆಯಿದೆ ಎಂದು ತಿಳಿಸಿದರು.
ಕಾಮ್ ಮಾಂಗೋ ಅಭಿಯಾನದಡಿ ಎಲ್ಲರಿಗೂ ಉದ್ಯೋಗ ನೀಡುವ ಉದ್ದೇಶವಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಕೂಲಿ ಕಾರ್ಮಿಕರು ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾಂ ಮಾಂಗೋ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮುದ್ದುಮೋಹನ್, ದೇಶದ ಆರು ರಾಜ್ಯಗಳಲ್ಲಿ ಕಾಮ್ ಮಾಂಗೋ ಅಭಿಯಾನ ಆಯೋಜಿಸಿದ್ದು, ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯನ್ನು ಯೋಜನೆಯ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಕಾಮ್ ಮಾಂಗೋ ಅಭಿಯಾನದ ಮೂಲಕ ಜ.4ರ ವರೆಗೆ ಅಭಿಯಾನದಡಿ ಪಂಚಾಯಿತಿ ಅಧಿಕಾರಿಗಳು, ಗ್ರಾಕೂಸ್ ಪದಾಧಿಕಾರಿಗಳು ಸೇರಿ ಎಲ್ಲರೂ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆಂದು ವಿವರಿಸಿದರು.
ಪಿಡಿಒಗಳಿಗೆ ಜವಾಬ್ದಾರಿ: ಅಭಿಯಾನದಡಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಕ್ಕೆ 15 ದಿನದಲ್ಲಿ ಕೆಲಸ ನೀಡುವ ಭರವಸೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಪಂ ಪಿಡಿಒ ಹೊಣೆ ವಹಿಸಲಾಗಿದೆ. ಯೋಜನೆಯಡಿ ಸಾಕಷ್ಟು ಉಪಯುಕ್ತ ಅಂಶಗಳನ್ನು ಈಚಿನ ದಿನಗಳಲ್ಲಿ ಸೇರಿಸಲಾಗಿದೆ ಎಂದರು.
ಅಧ್ಯಕ್ಷತೆ ಮಟಮಾರಿ ಗ್ರಾಪಂ ಅಧ್ಯಕ್ಷೆ ಪಿ.ಪದ್ಮಾವತಿ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಯೋಜನಾಧಿಕಾರಿ ಡಾ. ಟಿ.ರೋಣಿ, ಮಾಜಿ ಸದಸ್ಯ ಮಲ್ಲೇಶ ನಾಯಕ, ತಾಪಂ ಉಪಾಧ್ಯಕ್ಷೆ ಜಯಮ್ಮ, ಗ್ರಾಪಂ ಉಪಾಧ್ಯಕ್ಷ ಸಣ್ಣ ತಿಕ್ಕಯ್ಯ, ಗಾಕ್ರೂಸ್ ಗ್ರಾಮ ಘಟಕದ ಅಧ್ಯಕ್ಷೆ ಹುಸೇನಮ್ಮ, ನಾಗಮ್ಮ, ಮುಖಂಡರು ಸೇರಿ ಅನೇಕರಿದ್ದರು.