ತೆಲಂಗಾಣ ಬಂದ್; ಬಸ್ ಸಂಚಾರ ಸ್ಥಗಿತ
ರಾಯಚೂರು: ತೆಲಂಗಾಣ ಭಾಗದಲ್ಲಿ ಮತ್ತೆ ಪ್ರತಿಭಟನೆ ಚುರುಕುಗೊಂಡಿದ್ದು, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರ್ಪಡೆಗೆ ವಿರೋಧಿಸಿ ಗುರುವಾರ ತೆಲಂಗಾಣ ಬಂದ್ ಕರೆ ನೀಡಿದ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಗರದಿಂದ ಹೈದರಾಬಾದ್‌ಗೆ ದಿನವೂ ಸಂಚರಿಸುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ತೆಲಂಗಾಣ ಬಂದ್‌ನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಚರಿಸಲಿಲ್ಲ. ತೆಲಂಗಾಣ ಪ್ರದೇಶದ ಮಹೆಬೂಬ್ ನಗರ, ಹೈದರಾಬಾದ್ ಮತ್ತು ಸಿಕಿಂದ್ರಾಬಾದ್ ನಗರಗಳಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ನಗರ ಮತ್ತು ಜಿಲ್ಲೆಯಿಂದ ತೆರಳುತ್ತಿದ್ದ 9 ಬಸ್‌ಗಳು ಹಾಗೂ ಹೊರ ಜಿಲ್ಲೆಗಳಿಂದ ಹೈದರಾಬಾದ್‌ನತ್ತ ತೆರಳಬೇಕಿದ್ದ 10 ಬಸ್‌ಗಳೂ ಸೇರಿ ಒಟ್ಟು 19 ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.