ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಮಾ ನೌಕರರ ಸಂಘ ಪ್ರತಿಭಟನೆ

Lingaraj Badiger
Updated On : 6 Dec 2013, 11:57 am

ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.5
ವಿಮಾ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿ ಹೆಚ್ಚಳಕ್ಕೆ ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿಮಾ ನೌಕರರ ಸಂಘ ರಾಯಚೂರು ವಿಭಾಗದಾದ್ಯಂತ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಸಿತು.
ವಿಮಾ ನೌಕರರ ಸಂಘದ ಪದಾಧಿಕಾರಿಗಳು ನಗರದ ವಿಭಾಗೀಯ ಕಚೇರಿ ಎದುರು ಸಭೆ ಸೇರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ತೀವ್ರವಾಗಿ ಕುಸಿದಿದೆ. ವಿತ್ತೀಯ ಕೊರತೆ ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ. 4.8ರಷ್ಟಿದೆ. ದೇಶದ ಆರ್ಥಿಕ ಬೆಳವಣಿಗೆ ದರ ಶೇ.5ಕ್ಕೆ ನಿಂತಿದೆ. ದೇಶದ ಅರ್ಥ ವ್ಯವಸ್ಥೆಯ ಇಂತಹ ಗಂಭೀರ ಪರಿಸ್ಥಿತಿಯನ್ನು ಸುಧಾರಿಸಲು ಸುಮಾರು 72 ಮಿಲಿಯನ್ ಡಾಲರ್ ವಿದೇಶಿ ಬಂಡವಾಳದ ಅವಶ್ಯಕತೆ ಇದೆ. ಈ ಕಾರಣಕ್ಕೆ  ಕೇಂದ್ರ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ: ಆರ್ಥಿಕ ಪರಿಸ್ಥಿತಿ ಕುಸಿತ ತಡೆಯುವುದನ್ನು ಮರೆತ ಕೇಂದ್ರವು ವಿದೇಶಿ ಬಂಡವಾಳಕ್ಕೆ ಮೊರೆ ಹೋಗುವ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ದೇಶದ ಜನರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕಾರ್ಯ ಕೇಂದ್ರ ಮಾಡುತ್ತಿಲ್ಲ ಎಂದು ಟೀಕಿಸಿದರು.
ಕೇವಲ ವಿದೇಶಿ ಬಂಡವಾಳದ ಆಗಮನದಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ಬಿಂಬಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟದೆ ಹಾಗೂ ಜನಪರ ನೀತಿಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ವಿಮಾ ಉದ್ದಿಮೆಯಲ್ಲಿ ಸದ್ಯ ಶೇ. 26ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅನುಮತಿಯಿದ್ದು, ಈ ಪ್ರಮಾಣವನ್ನು ಶೀಘ್ರವೇ ಶೇ. 49ಕ್ಕೆ ಏರಿಸುವ ಪ್ರಯತ್ನದಲ್ಲಿ ಸರ್ಕಾರವಿದೆ. ವಿಮಾ ಕ್ಷೇತ್ರ ಖಾಸಗೀಕರಣಗೊಂಡು 13 ವರ್ಷವಾದರೂ ಖಾಸಗಿ ವಿಮಾ ಕಂಪನಿಗಳು ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ ಎಂದು ದೂರಿದರು.
ಸಂಸತ್ತಿನ ಸ್ಥಾಯಿ ಸಮಿತಿ ಹೇಳಿದ್ದೇನು?: ಮೇಲಾಗಿ ವಿಮೆ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸಂಸತ್ತಿನ ಸ್ಥಾಯಿ ಸಮಿತಿಯು ಈಗಾಗಲೇ ತನ್ನ ಅಭಿಪ್ರಾಯ ನೀಡಿದ್ದು, ಸದ್ಯಕ್ಕೆ ವಿಮಾ ರಂಗದಲ್ಲಿ ಹೆಚ್ಚಿನ ವಿದೇಶಿ ನೇರ ಬಂಡವಾಳದ ಮಿತಿಯ ಹೆಚ್ಚಳದ ಅವಶ್ಯಕತೆ ಇಲ್ಲ ಎಂದು ಸೂಚಿಸಿದೆ. ವಿಷಯ ಈಗ ಸಂಸತ್ತಿನ ಮುಂದಿದ್ದು, ಡಿ.5ರಿಂದ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮತಿ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಂಡವಾಳಶಾಹಿಗಳಿಗೆ ಸಮರ್ಪಿಸುವ ಹುನ್ನಾರ: ಕೇಂದ್ರದ ಇಂಥ ಅಪಾಯಕಾರಿ ನಿರ್ಧಾರವು ಮುಂದಿನ ದಿನಗಳಲ್ಲಿ ಸಾರ್ವಜನಿಕ ರಂಗದ ವಿಮಾ ಉದ್ದಿಮೆಯನ್ನು ಖಾಸಗೀಕರಿಸಿ ದೇಶಿಯ ಹಾಗೂ ವಿದೇಶಿಯ ಬಂಡವಾಳಶಾಹಿಗಳಿಗೆ ಸಮರ್ಪಿಸುವ ಹುನ್ನಾರವಾಗಿದೆ. ಇದರ ವಿರುದ್ಧ ನೌಕರರು ಈಗಾಗಲೇ ದೇಶದಾದ್ಯಂತ ಸಂಸದರನ್ನು ಭೇಟಿಯಾಗಿ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆಂದು ತಿಳಿಸಿದರು.
ವಿಮಾ ಕಾಯಿದೆ ತಿದ್ದುಪಡಿ ಕೂಡಲೇ ಕೈಬಿಡಬೇಕು. ಕಾಯಿದೆಗೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆದರೆ, ಮರುದಿನವೇ ವಿಮಾ ನೌಕರರು ಒಂದು ದಿನದ ಮುಷ್ಕರ ನಡೆಸುವ ಮೂಲಕ ಕೇಂದ್ರಕ್ಕೆ ಎಚ್ಚರಿಸಲಿದ್ದಾರೆಂದು ಹೋರಾಟಗಾರರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಸೇರಿದಂತೆ ಅನೇಕರಿದ್ದರು.

ಎಸ್ಮಾಗೆ ವಿರೋಧ...
ಕರ್ನಾಟಕದ ಸರ್ಕಾರವು ಬೆಳಗಾವಿಯ ಅಧಿವೇಶನದಲ್ಲಿ ಎಸ್ಮಾ ಕಾಯಿದೆ ಜಾರಿಗೆ ಅನುಮೋದಿಸಿದ್ದನ್ನು ತೀವ್ರವಾಗಿ ವಿರೋಧಿಸಿದ ಪ್ರತಿಭಟನಾಕಾರರು, ಈ ಕಾಯ್ದೆಯು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಕಾರ್ಮಿಕರಿಗೆ ಇರುವ ನ್ಯಾಯಯುತ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿ, ತಕ್ಷಣವೇ ಕಾಯಿದೆ ವಾಪಸ್‌ಗೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement