ಸಿಕ್ಕಸಿಕ್ಕಲ್ಲಿ ಧಮ್ ಹೊಡ್ದ್ರೆ ದಂಡ!
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.5
ಇನ್ನು ಮುಂದೆ ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿಗಳು, ಕಾಲೇಜು ಇತರೆ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹಾಗೆ ಮಾಡಿದರೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆದಿದ್ದ ತಂಬಾಕು ಉತ್ಪನ್ನಗಳ ನಿಯಂತ್ರಣ ಅಧಿನಿಯಮ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಇಂಥ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ದಂಡ ವಿಧಿಸಲು ಸರ್ಕಾರದ ಆದೇಶವಿದ್ದು, ಈ ಕುರಿತು ಹೆಚ್ಚಿನ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡುವುದು ಅವಶ್ಯ. ಅಂಗಡಿಗಳಲ್ಲಿ ಸಿಗರೇಟ್ ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ ಹಾಕಿರುವ ಜಾಹೀರಾತು ಫಲಕಗಳ ಅಳತೆಗೂ ಮಿತಿ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.
ಆದೇಶ ಉಲ್ಲಂಘಿಸಿದರೆ ದಂಡ: ಮಾರಾಟಗಾರರು ಉತ್ಪನ್ನಗಳ ಮಾರಾಟಕ್ಕಾಗಿ ತರಹೇವಾರಿ ಜಾಹೀರಾತುಗಳನ್ನು ನಿಗದಿತ ಅಳತೆ ಮೀರಿ ಜಾಹೀರಾತು ಫಲಕ ಪ್ರದರ್ಶಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಮಾರಾಟಗಾರರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡುವಂಥ ವ್ಯಾಪಾರಸ್ಥರ ವಿರುದ್ಧ ದಂಡ ವಿಧಿಸುವುದು ತಪ್ಪಿದಲ್ಲಿ ಶಿಕ್ಷೆಗೆ ಗುರಿಪಡಿಸಲು ಕಾನೂನುಗಳು ರೂಪಿತವಾಗಿವೆ ಎಂದು ತಿಳಿಸಿದರು.
ಜಾಗೃತಿಗೆ ಸಮಿತಿ ರಚನೆ: ಈ ನಿಟ್ಟಿನಲ್ಲಿ ಜನ ಜಾಗೃತಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿದ್ದು, ಎಸ್ಪಿ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಸಭೆಗೆ ತಿಳಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ, ಔಷಧ ನೀರಿಕ್ಷಕರು, ಆಹಾರ ನೀರಿಕ್ಷಕರು ಸರ್ಕಾರಿ ಸದಸ್ಯರಾಗಿದ್ದು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಐಎಂಎ, ಎಫ್ಪಿಎಐ ಹಾಗೂ ಬಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯೋಜಕರು, ಯುನಿಸೆಫ್, ಡಿಡಿಪಿಐ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆಂದು ಹೇಳಿದರು.
ದಾಳಿ ನಡೆಸಲು ಸಮಿತಿ: ಅದೇ ರೀತಿ ಜಿಲ್ಲೆಯಲ್ಲಿ ದಾಳಿ ನಡೆಸಲು ದಾಳಿ ಸಮಿತಿಯೊಂದನ್ನು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ. ಡಿವೈಎಸ್ಪಿ, ಬಿಇಒ, ಸರ್ವೆಲೆನ್ಸ್ ಅಧಿಕಾರಿಗಳು, ನಗರಸಭೆ ಕಮಿಷನರ್ ಹಾಗೂ ಯುನಿಸೆಫ್ ಸಂಯೋಜಕರು ಈ ಸಮಿತಿಯಲ್ಲಿದ್ದು, ಪ್ರತಿ ಸೋಮವಾರ ಹಾಗೂ ಗುರುವಾರ ಸಮಿತಿ ದಾಳಿ ನಡೆಸಿ ಪ್ರಕರಣಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಪವಾಡೆಪ್ಪ, ದಾಳಿ ನಡೆಸುವ ಮತ್ತು ದಂಡ ವಿಧಿಸುವ ಅಧಿಕಾರಿಗಳು, ದಂಡದ ಹಣವನ್ನು ರಾಯಚೂರು ನಗರದ ಎಕ್ಸಿಸ್ ಬ್ಯಾಂಕಿನಲ್ಲಿನ ಇಲಾಖೆಯ ಖಾತೆಗೆ ದಂಡದ ಮೊತ್ತ ಜಮಾ ಮಾಡಲು ಮನವಿ ಮಾಡಿದರು.
ಸಭೆಯಲ್ಲಿ ರೀಮ್ಸ್ನ ಡಾ. ಶ್ರೀನಿವಾಸಮೂರ್ತಿ, ಮಾನಸಿಕ ರೋಗ ತಜ್ಞ ಡಾ. ಮಾಲಿಪಾಟೀಲ್, ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಿ.ಡಿ. ಪಾಟೀಲ್, ಸರ್ವೆಲೆನ್ಸ್ ಅಧಿಕಾರಿ ಡಾ. ನರಸಿಂಹಲು, ಐಎಂಎ ಹಾಗೂ ಐಎಂಎ ಅಧ್ಯಕ್ಷ ಡಾ. ಸಿ.ಎನ್. ಕುಲ್ಕರ್ಣಿ, ಮುನಿಸಿಪಲ್ ಕಮೀಶನರ್ ಬಸಪ್ಪ, ಲಯನ್ಸ್ ಕ್ಲಬ್ ಪ್ರತಿನಿಧಿಗಳು, ಆಹಾರ ಇಲಾಖೆಯ ಅಧಿಕಾರಿ ಪಿ.ಕೆ. ಮಠಪತಿ, ಡಿಡಿಪಿಯು ಸಿ.ಕಲ್ಲಯ್ಯ, ಯುನಿಸೆಫ್ ಸಂಯೋಜಕ ರಾಘವೇಂದ್ರ ಭಟ್ ಮತ್ತಿತರರಿದ್ದರು.